ರಾಷ್ಟ್ರೀಯ

ಕೊರೋನಾ ಸೋಂಕಿಗೆ ಪುರಾವೆ ಆಧಾರಿತ ಪತಂಜಲಿ ಸಂಸ್ಥೆಯಿಂದ ಕೊರೋನಿಲ್ ಔಷಧಿ: ಬಾಬಾ ರಾಮ್ ದೇವ್

Pinterest LinkedIn Tumblr

ನವದೆಹಲಿ: ಈ ಹಿಂದೆ ಕೊರೋನಾ ಸೋಂಕಿಗೆ ಔಷಧಿ ಸಿದ್ಧಪಡಿಸಿರುವುದಾಗಿ ಹೇಳಿದ್ದ ಯೋಗ ಗುರು ರಾಮ್ ದೇವ್ ಅವರು ಇದೀಗ ಮತ್ತದೇ ಕೊರೋನಾ ಸೋಂಕಿಗೆ ಪುರಾವೆ ಆಧಾರಿತ ಕೊರೋನಾ ಔಷಧಿ ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ ದೇವ್ ಅವರು, ತಮ್ಮ ಆಯುರ್ವೇದ ಬ್ರಾಂಡ್ ಪತಂಜಲಿ ಸಂಸ್ಥೆ ಕೊರೋನಾ ಔಷಧಿ ಕೊರೊನಿಲ್ ಮಾತ್ರೆಗಳನ್ನು ಬಿಡುಗಡೆ ಮಾಡಿದ್ದು ಈ ಔಷಧಿ ಸೇವಿಸಿದವರಲ್ಲಿ ಕೊರೋನಾ ಸೋಂಕು ಗುಣಮುಖವಾಗಿರುವುದು ಪುರಾವೆ ಸಹಿತ ಸಾಬೀತಾಗಿದೆ ಎಂದು ಹೇಳಿದ್ದಾರೆ.

ಪತಂಜಲಿ ಬಿಡುಗಡೆ ಮಾಡಿರುವ ಕೊರೋನಿಲ್ ಮಾತ್ರೆಗಳು ಕೊರೋನಾ ಸೋಂಕು ಗುಣಪಡಿಸಬಲ್ಲ ಗುಣಹೊಂದಿದೆ. ಇದು ಸಂಶೋಧನೆಗಳಲ್ಲಿ ಸಾಬೀತಾಗಿದ್ದು, ಕೊರೋನಿಲ್ ಔಷಧಿ ಕೋವಿಡ್ -19 ಗೆ ಪುರಾವೆ ಆಧಾರಿತ ಔಷಧ ಎಂದು ಕಂಪನಿ ಹೇಳಿಕೊಂಡಿದೆ. ಅಂತೆಯೇ 158 ದೇಶಗಳಲ್ಲಿ ಕೊರೋನಾಗೆ ಚಿಕಿತ್ಸೆ ನೀಡಲು ಔಷಧಿ ಸಹಾಯ ಮಾಡುತ್ತದೆ ಎಂದು ಪತಂಜಲಿ ಆಯುರ್ವೇದ ಟ್ವೀಟ್ ಮಾಡಿದೆ.

ಇದೇ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ಲಸಿಕೆ ಹೊರತು ಪಡಿಸಿದರೆ ವಿಶ್ವಾದ್ಯಂತ ಕೊರೋನಾ ಸೋಂಕಿಗೆ ಯಾವುದೇ ಔಷಧಿ ಇಲ್ಲ. ಆದರೆ ಕೊರೋನಿಲ್ ಕೋವಿಡ್-19ಗೆ ಉತ್ತಮ ಔಷಧವಾಗಬಹುದು ಎಂದು ಹೇಳಿದ್ದಾರೆ.

ಇನ್ನು ಬಾಬಾ ರಾಮ್ ದೇವ್ ಅವರು ಕೊರೋನಾ ಸೋಂಕಿಗೆ ಔಷಧಿ ಕಂಡುಹಿಡಿದಿರುವುದಾಗಿ ಹೇಳಿಕೊಂಡಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಲಸಿಕೆ ಆವಿಷ್ಕಾರಕ್ಕೂ ಮುನ್ನ ಇದೇ ಬಾಬಾ ರಾಮ್ ದೇವ್ ಅವರು ಇದೇ ಕೊರೋನಿಲ್ ಕಿಟ್ ಅನ್ನು ಕೊರೋನಾ ಸೋಂಕಿಗೆ ಔಷಧಿ ಎಂದು ಹೇಳಿದ್ದರು. ಆದರೆ ಈ ಪ್ರಚಾರಕ್ಕೆ ಕಿಡಿಕಾರಿದ್ದ ಕೇಂದ್ರ ಆರೋಗ್ಯ ಇಲಾಖೆ ಕೊರೋನಾ ಸೋಂಕಿಗೆ ಈ ವರೆಗೂ ಸಾಬೀತು ಪಡಿಸಿದ ಔಷಧಿ ಇಲ್ಲ, ಹೀಗಾಗಿ ಯಾವುದೇ ಔಷಧಿಯನ್ನು ಕೊರೋನಾ ಔಷಧಿ ಎಂದು ಪ್ರಚಾರ ಮಾಡಬಾರದು ಎಂದು ಹೇಳಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಪತಂಜಲಿ ಸಂಸ್ಥೆ ತನ್ನ ಕೊರೋನಾ ಔಷಧಿಯ ಲೇಬಲ್ ಬದಲಿಸಿ, ಕೆಮ್ಮು, ಶೀತ, ಜ್ವರ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿ ಎಂದು ಪ್ರಚಾರ ಮಾಡಿತು. ಇನ್ನು ಪತಂಜಲಿ ಸಂಸ್ಥೆ ಹೇಳಿರುವಂತೆ ಈ ಕೊರೋನಿಲ್ ಕಿಟ್ ಅನ್ನು ಅಕ್ಟೋಬರ್ ವರೆಗೂ 85 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದೆ.

Comments are closed.