ರಾಷ್ಟ್ರೀಯ

16 ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿದ್ದ ನಟೋರಿಯಸ್ ಸೈಕೋ ಹಂತಕನ ಬಂಧನ; ಹಂತಕ ಸಿಕ್ಕಿದ್ದು ಹೇಗೆ ಗೊತ್ತೇ..?

Pinterest LinkedIn Tumblr

ಹೈದರಾಬಾದ್: 16 ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿದ್ದ ನಟೋರಿಯಸ್ ಸೈಕೋ ಹಂತಕನನ್ನು ಪೊಲೀಸರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹೈದರಾಬಾದ್​ ಟಾಸ್ಕ್ ಪೋರ್ಸ್ ಮತ್ತು ರಾಚಕೊಂಡ ಪೊಲೀಸರು ನಡೆಸಿದ ಜಂಟಿ ದಾಳಿಯ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಹೈದರಾಬಾದ್ ಪೊಲೀಸ್ ಕಮಿಷನರ್ ಅಂಜನ್ ಕುಮಾರ್ ಅವರು ಈ ಪ್ರಕರಣದ ಮಾಹಿತಿಯನ್ನು ಇಂದು ಮಾಧ್ಯಮದ ಮುಂದೆ ಬಿಚ್ಚಿಟ್ಟರು. ಆರೋಪಿ ಮೈನಾ ರಾಮುಲು 16 ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಕೆಲವು ಮೃತದೇಹಗಳ ಗುರುತು ಸಿಗದ ಹಾಗೆ ವಿಕೃತವಾಗಿ ಕೊಲೆ ಮಾಡಿದ್ದ ಎಂದು ಕಮಿಷನರ್ ಹೇಳಿದ್ದಾರೆ.

ಆರೋಪಿ ವಿರುದ್ಧ ಮೆದಕ್, ಸೈಬರ್​ಬಾದ್ ಮತ್ತು ರಾಚಕೊಂಡ ನಗರದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ರಾಮುಲು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಪ್ರಸ್ತುತ ಹೈದರಾಬಾದ್​ನ ಬೋರಾಬಂದ್​ನಲ್ಲಿ ವಾಸವಾಗಿದ್ದ ಎಂದು ಕಮಿಷನರ್ ತಿಳಿಸಿದ್ದಾರೆ.

ರಾಮುಲು ವಿರುದ್ಧ ರಾಚಕೊಂಡ ಮತ್ತು ಸೈಬರಾಬಾದ್​ ಕಮಿಷನರೆಟ್ ವ್ಯಾಪ್ತಿಯಲ್ಲಿ ಈ ಹಿಂದೆ 21 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 16 ಕೊಲೆ ಪ್ರಕರಣ, ನಾಲ್ಕು ರಾಬರಿ ಪ್ರಕಣಗಳು ಹಾಗೂ ಒಂದು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಒಂದರಲ್ಲಿ ರಾಮುಲುಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆನಂತರ ಆತ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. ಆರೋಪಿ ರಾಮುಲು ಇತ್ತೀಚೆಗೆ ನಡೆದ ಎರಡು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಒಂದು ಪ್ರಕತಣ ಮುಲುಗು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಮತ್ತೊಂದು ಪ್ರಕರಣ ಘಾಟಕೆಸರ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿತ್ತು ಎಂದು ಕಮಿಷನರ್ ಅಂಜನ್ ಕುಮಾರ್ ಮಾಹಿತಿ ನೀಡಿದರು.

ಆರೋಪಿ ರಾಮುಲು 2003ರಿಂದ ಕೊಲೆ ಮತ್ತು ರಾಬರಿ ಮಾಡುವುದನ್ನು ಆರಂಭಿಸಿದ್ದ. ಇವನ ಕೈಯಿಂದ ಕೊಲೆಯಾದವರೆಲ್ಲಾ ಮಹಿಳೆಯರೇ ಆಗಿದ್ದಾರೆ. ಆದರೆ, ಅವರನ್ನು ಈತ ಏಕೆ ಕೊಂದಿದ್ದಾನೆ ಎಂಬ ಕಾರಣ ಸಂಪೂರ್ಣ ವಿಚಾರಣೆ ಬಳಿಕ ತಿಳಿಯಲಿದೆ ಎಂದು ಕಮಿಷನರ್ ತಿಳಿಸಿದರು.

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಹೈದರಾಬಾದ್​ನ ಅಂಕುಶಾಪುರ್​ ಹೊರವಲಯದಲ್ಲಿ ಜನವರಿ ಮೊದಲ ವಾರದಲ್ಲಿ ಅರ್ಧ ಬೆಂದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಸೀರೆಯಲ್ಲಿ ಒಂದು ಸಣ್ಣ ಚೀಟಿಯನ್ನು ಗಂಟು ಹಾಕಿರುವುದು ಪತ್ತೆಯಾಗಿತ್ತು. ಆ ಬಳಿಕ ಪೊಲೀಸರು ಚೀಟಿಯಲ್ಲಿ ಸಿಕ್ಕ ನಂಬರ್​ಗೆ ಕರೆ ಮಾಡಿ ಮಾಹಿತಿ ಕಲೆ ಹಾಕಿದ್ದರು. ಆ ಮೊಬೈಲ್ ನಂಬರ್ ವ್ಯಕ್ತಿ ಕೊಲೆಯಲ್ಲಿ ಭಾಗಿಯಾಗಿಲ್ಲ. ಆದರೆ, ಸುಳಿವನ್ನು ಆಧರಿಸಿ ಪೊಲೀಸರು ಅನೇಕ ಸಿನಿಮೀಯ ತಿರುವುಗಳ ನಂತರ ಸೈಕೋ ಕಿಲ್ಲರ್ ಅನ್ನು ಬಂಧಿಸಿದ್ದಾರೆ.

Comments are closed.