ರಾಷ್ಟ್ರೀಯ

ಗಡಿ ಭಾಗದಲ್ಲಿ ಚೀನಾ ಮತ್ತೆ ಕ್ಯಾತೆ; ನಕು ಲಾ ಪಾಸ್ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ

Pinterest LinkedIn Tumblr

ಸಿಕ್ಕಿಂ: ಗಲ್ವಾನ್ ಗಡಿ ಘರ್ಷಣೆ ಸಂಭವಿಸಿದ 6 ತಿಂಗಳ ಬಳಿಕ ಸಿಕ್ಕಿಂನ ನಾಕು ಲಾ ಗಡಿ ಭಾಗದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದೆ. ನಕು ಲಾ ಪಾಸ್ ನಲ್ಲಿ ಮಡ್ರ್ಯಾಗನ್ ಪಡೆಗಳು ಗಡಿ ನುಸುಳಲು ಯತ್ನ ನಡೆಸಿದ್ದು, ಈ ವೇಳೆ ಚೀನಾ ಹಾಗೂ ಭಾರತೀಯ ಯೋಧರ ನಡುವೆ ಘರ್ಷಣೆ ಎದುರಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಮಾಧ್ಯಮ ವರದಿಗಳನ್ವಯ ಚೀನಾ ಸೈನಿಕರು ಎಲ್‌ಎಸಿ ಯಥಾಸ್ಥಿತಿ ಬದಲಾಯಿಸಲು ಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಚೀನೀ ಸೈನಿಕರು ಭಾರತದ ಗಡಿ ದಾಟಲು ಯತ್ನಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಯೋಧರು ಅವರನ್ನು ತಡೆದಿದ್ದಾರೆ. ಉಭಯ ರಾಷ್ಟ್ರದ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ ನಾಲ್ವರು ಭಾರತೀಯ ಹಾಗೂ 20 ಚೀನಾ ಯೋಧರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಪ್ರತಿಕೂಲ ಹವಾಮಾನದ ಮಧ್ಯೆಯೂ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಸಫಲವಾಗಿದೆ. ಭಾರತದ ಸೈನಿಕರ ಪ್ರತಿರೋಧದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದಾರೆ. ಈ ಸಂದರ್ಭದಲ್ಲಿ ಎರಡು ಸೇನೆಗಳ ಮಧ್ಯೆ ಘರ್ಷಣೆ ಉಂಟಾಗಿದೆ. ಘರ್ಷಣೆ ವೇಳೆ ನಾಲ್ವರು ಭಾರತೀಯ ಯೋಧರು ಸಣ್ಣಪುಟ್ಟ ಗಾಯಗೊಂಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಕಳೆದ ವಾರ ಸಿಕ್ಕಿಂನ ನಾಕುಲಾ ಸೆಕ್ಟರ್‌ನಲ್ಲಿ ಘರ್ಷಣೆ ನಡೆದಿತ್ತೆಂದು ವರದಿಗಳು ಉಲ್ಲೇಖಿಸಿವೆ. ಗಡಿ ದಾಟಲು ಯತ್ನಿಸಿದ ಚೀನಾದ ಸೈನಿಕರನ್ನು ತಮ್ಮ ಕಾರ್ಯಾಚರಣೆ ಮೂಲಕ ಭಾರತೀಯ ಸೈನಿಕರು ತಡೆದಿದ್ದಾರೆಂದು ಹೇಳಲಾಗುತ್ತಿದೆ.

ಘರ್ಷಣೆ ಕುರಿತು ಭಾರತೀಯ ಸೇನಾ ಪಡೆ ಸ್ಪಷ್ಟನೆ ನೀಡಿದ್ದು, ಜನವರಿ 20 ರಂದು ಸಿಕ್ಕಿಂನ ನಾಕು ಲಾ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಚೀನಾ ಪಿಎಲ್‌ಎ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು ಸತ್ಯ. ಆದರೆ, ಇದೊಂದು ಸಣ್ಣ ಘರ್ಷಣೆಯಾಗಿದ್ದು, ಶಿಷ್ಟಾಚಾರಗಳನ್ವಯ ಅದನ್ನು ಸ್ಥಳೀಯ ಕಮಾಂಡರ್‌ಗಳು ಪರಿಹರಿಸಿದ್ದಾರೆಂದು ಹೇಳಿದೆ.

15-16 ಜೂನ್‌ನಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯ ಎಲ್‌ಎಸಿಯಲ್ಲೂ ಉಭಯ ರಾಷ್ಟ್ರದ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದರಲ್ಲಿ ಭಾರತೀಯ ಸೇನೆಯ ಕರ್ನಲ್ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಈ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಚೀನಾಗೆ ತಕ್ಕ ಪಾಠ ಕಲಿಸಿದ್ದರೆನ್ನಲಾಗಿತ್ತು.

ಸೈನಿಕರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಿ ಭಾರತ ತಾಕೀತು
ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ನಿಯೋಜಿಸಿರುವ ಸಾವಿರಾರು ಚೀನಾ ಯೋಧರನ್ನು ಕೂಡಲೇ ವಾಪಸ್ ಕರೆಸಿಕೊಳ್ಳುವಂತೆ ಭಾರತ ಚೀನಾಕ್ಕೆ ತಾಕೀತು ಮಾಡಿದೆ.

ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ನಡುವೆ ನಡೆದ 9 ನೇ ಸುತ್ತಿನ ಸೇನಾ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಭಾರತ ಪ್ರಬಲವಾಗಿ ಒತ್ತಾಯಿಸಿದೆ.

ಚುಷುಲ್-ಮೋಲ್ಡೊ ಗಡಿ ಸಿಬ್ಬಂದಿ ಸಭೆ (ಬಿಪಿಎಂ) ಸ್ಥಳದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮಾತುಕತೆ, ಸೋಮವಾರ ಮಧ್ಯರಾತ್ರಿ 2.30ರವರೆಗೂ ಮುಂದುವರಿಯಿತು. ಪೂರ್ವ ಲಡಾಖ್ ಪ್ರದೇಶದಲ್ಲಿ ನವೆಂಬರ್ 6ರಂದು ಟ್ಯಾಂಕ್‌ಗಳು, ವೈಮಾನಿಕ ರಕ್ಷಣಾ ಸಾಮಗ್ರಿಗಳೊಂದಿಗೆ ಸುಮಾರು 50 ಸಾವಿರ ಪಡೆಗಳನ್ನು ನಿಯೋಜಿಸಿದ ಬಳಿಕ ಎರಡು ದೇಶಗಳ ನಡುವೆ ಮಾತುಕತೆ ನಡೆದಿತ್ತು.

‘ಭಾರತ ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 9ನೇ ಸುತ್ತಿನ ಮಾತುಕತೆ ಇಂದು ರಾತ್ರಿ 2.30ಕ್ಕೆ ಅಂತ್ಯಗೊಂಡಿತು. ಪೂರ್ವ ಲಡಾಖ್ ವಲಯದ ಚುಷುಲ್‌ನಲ್ಲಿ ಈ ಸಭೆಯು 15 ಗಂಟೆಗೂ ಹೆಚ್ಚು ಕಾಲ ನಡೆಯಿತು’ ಎಂದು ಎಎನ್‌ಐ ವರದಿ ಮಾಡಿದೆ.

ಮಾತುಕತೆ ವೇಳೆ ಯಲ್ಲಿ ಭಾರತ ನಿಯೋಗದ ನೇತೃತ್ವ ವಹಿಸಿದ್ದ ಲೇಹ್ ಮೂಲದ ಎಚ್‌ಕ್ಯೂ 14 ಕಾರ್ಪ್ಸ್‌ನ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಎಲ್‌ಎಸಿಯಲ್ಲಿನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಚೀನಾಕ್ಕೆ ಒತ್ತಾಯಿಸಿದರು ಎನ್ನಲಾಗಿದೆ.

Comments are closed.