
ಅಹಮದಾಬಾದ್: ದೇಶದ 27 ನಗರಗಳಿಗೆ ಸಾವಿರ ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅಹಮದಾಬಾದ್ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಮತ್ತು ಸೂರತ್ ಮೆಟ್ರೊ ರೈಲು ಯೋಜನೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಮೆಟ್ರೊ ರೈಲು ಯೋಜನೆ ಬಗ್ಗೆ ಆಧುನಿಕವಾಗಿ ಯೋಚಿಸದ, ಯೋಜನೆ ಹೊಂದಿರದ ದಿನಗಳಿದ್ದವು. ಇದರಿಂದಾಗಿ ವಿವಿಧ ಮೆಟ್ರೊ ನಗರಗಳಲ್ಲಿ ವಿವಿಧ ರೀತಿಯಲ್ಲಿ ಮೆಟ್ರೊ ರೈಲು ಸಂಪರ್ಕ ಜಾಲ ಸೃಷ್ಟಿಯಾಯಿತು. ಅಹಮದಾಬಾದ್ ನ ಮತ್ತು ಸೂರತ್ ನ ಮೆಟ್ರೊ ಸಂಪರ್ಕ ಜಾಲವು ದೇಶದ ಎರಡು ಪ್ರಮುಖ ಉದ್ಯಮ ಕೇಂದ್ರದ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದು, ಕೇಂದ್ರ ಸರ್ಕಾರ ಆಂತರಿಕ ನಗರ ಸಂಚಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.
ತಮ್ಮ ನೇತೃತ್ವದ ಸರ್ಕಾರ ಮತ್ತು ಹಿಂದಿನ ಯುಪಿಎ ಸರ್ಕಾರ ಮೆಟ್ರೊ ರೈಲು ಸಂಪರ್ಕವನ್ನು ವಿಸ್ತರಿಸುವ ಬಗ್ಗೆ ಬೇರೆ ಬೇರೆ ದೃಷ್ಟಿಕೋನವನ್ನು ಹೊಂದಿವೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಹೋಭದಲ್ಲಿ ಹೋಲಿಕೆ ಮಾಡಿದರು.
2014ಕ್ಕಿಂತ ಮೊದಲು 10ರಿಂದ 12 ವರ್ಷಗಳಲ್ಲಿ 225 ಕಿಲೋ ಮೀಟರ್ ಮೆಟ್ರೊ ರೈಲು ಸಂಚಾರ ಕಾರ್ಯನಿರ್ವಹಣೆ ಪ್ರಾರಂಭಿಸಿದ್ದವು. ಕಳೆದ 6 ವರ್ಷಗಳಲ್ಲಿ 450ಕ್ಕೂ ಹೆಚ್ಚು ಮೆಟ್ರೊ ಸಂಪರ್ಕ ಜಾಲ ಕಾರ್ಯನಿರ್ವಹಣೆ ಮಾಡುತ್ತಿವೆ, ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಕ್ಕೆ ಆಧುನಿಕ ದೃಷ್ಟಿಕೋನವಿರಲಿಲ್ಲ ಎಂದು ಮೋದಿ ಈ ಸಂದರ್ಭದಲ್ಲಿ ಆರೋಪಿಸಿದರು.
ಅಹಮದಾಬಾದ್ ಮತ್ತು ಸೂರತ್ ಮೆಟ್ರೊ ಯೋಜನೆಗಳು ಈ ನಗರಗಳಿಗೆ ಪರಿಸರ ಸ್ನೇಹಿ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ನ್ನು ಒದಗಿಸುವ ನಿರೀಕ್ಷೆಯಿದೆ.
ಅಹಮದಾಬಾದ್ ಮೆಟ್ರೊ ರೈಲು ಯೋಜನೆಯ ಎರಡನೇ ಹಂತ 28.25 ಕಿಲೋ ಮೀಟರ್ ಉದ್ದ ಹೊಂದಿದ್ದು ಎರಡು ಕಾರಿಡಾರ್ ನ್ನು ಒಳಗೊಂಡಿದೆ. ಕಾರಿಡಾರ್ 1 22.8 ಕಿಲೋ ಮೀಟರ್ ಉದ್ದವಿದ್ದು ಮೊಟೆರಾ ಸ್ಟೇಡಿಯಂನಿಂದ ಮಹಾತ್ಮಾ ಮಂದಿರ್ ವರೆಗೆ ಕಾರಿಡಾರ್ -2 5.4 ಕಿಲೋ ಮೀಟರ್ ಉದ್ದವನ್ನು ಜಿಎನ್ ಎಲ್ ಯುನಿಂದ ಗಿಫ್ಟ್ ಸಿಟಿಯವರೆಗೆ ಒಳಗೊಳ್ಳುತ್ತದೆ.
ಎರಡನೇ ಹಂತದ ಯೋಜನೆ ಪೂರ್ಣಗೊಳ್ಳಲು ವೆಚ್ಚ ಸುಮಾರು 5 ಸಾವಿರದ 384 ಕೋಟಿ ರೂಪಾಯಿಗಳಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಸೂರತ್ ಮೆಟ್ರೊ ರೈಲು ಯೋಜನೆ 40.35 ಕಿಲೋ ಮೀಟರ್ ಉದ್ದವಾಗಿದ್ದು ಎರಡು ಕಾರಿಡಾರ್ ಗಳನ್ನು ಹೊಂದಿರುತ್ತದೆ. ಕಾರಿಡಾರ್-1 21.61 ಕಿಲೋ ಮೀಟರ್ ಉದ್ದವಾಗಿದ್ದು ಸರ್ತನದಿಂದ ಡ್ರೀಮ್ ಸಿಟಿಯವರೆಗೆ, ಕಾರಿಡಾರ್ -2 18.74 ಕಿಲೋ ಮೀಟರ್ ಉದ್ದವಾಗಿದ್ದು ಬೆಸನ್ ನಿಂದ ಸರೊಲಿಯವರೆಗೆ ಒಳಗೊಂಡಿರುತ್ತದೆ. ಇದು ಪೂರ್ಣಗೊಳ್ಳಲು 12,020 ಕೋಟಿ ರೂಪಾಯಿ ವೆಚ್ಚ ತಗುಲಬಹುದು.
Comments are closed.