ರಾಷ್ಟ್ರೀಯ

ಕೇರಳ: 29ರ ಹರೆಯದ ಪತಿ 51ರ ಪತ್ನಿಯನ್ನು ಹತ್ಯೆ ಮಾಡಿದ್ದು ಯಾಕೆ ಗೊತ್ತಾ?

Pinterest LinkedIn Tumblr


ಕೊಚ್ಚಿ: ವಯಸ್ಸಿನಲ್ಲಿ ತುಂಬಾ ಅಂತರವಿದ್ದ ಜೋಡಿಯೊಂದು ಕೇವಲ 2 ತಿಂಗಳ ಹಿಂದಷ್ಟೆ ಮದುವೆಯಾಗಿತ್ತು. ವಿದ್ಯುತ್​ ಶಾಕ್​ನಿಂದ 51ರ ಪತ್ನಿಯ ಸಾವಿನ ಪ್ರಕರಣದಲ್ಲಿ ಆಕೆಯ 29 ವರ್ಷದ ಪತಿಯನ್ನು ಕೇರಳದ ವೆಲ್ಲರಡಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಸಖ ಕುಮಾರಿ ಕೊಲೆಯಾದ ಮಹಿಳೆ. ಬಂಧಿತ ಪತಿ ಅರುಣ್​, ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆಂದು ವೆಲ್ಲರಡಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ರಾಜತಿಲಕಂ ಮಾಹಿತಿ ನೀಡಿದ್ದಾರೆ.

ಘಟನೆಯ ವಿವರಣೆಗೆ ಬರುವುದಾದರೆ, ಸಖ ಕುಮಾರಿ ವಿದ್ಯುತ್​ ಶಾಕ್​ನಿಂದ ಸಾವಿಗೀಡಾಗಿರುವ ಸ್ಥಿತಿಯಲ್ಲಿ ಆಕೆಯ ಮೃತದೇಹ ಕಾರಕೋಣಂನ ಥ್ರೆಸಿಯಾಪುರಂನಲ್ಲಿನ ನಿವಾಸದಲ್ಲಿ ಪತ್ತೆಯಾಗಿತ್ತು. ಪೊಲೀಸ್​ ಮೂಲಗಳ ಪ್ರಕಾರ ಬಲರಾಮಪುರಂ ನಿವಾಸಿ ಅರುಣ್​ ವಿದ್ಯುತ್​ ಶಾಕ್​ ನೀಡಿ ಕೊಲೆ ಮಾಡಿದ್ದಾನೆಂದು ತಿಳಿಸಿದ್ದಾರೆ. ಇಬ್ಬರ ನಡುವಿನ ಜಗಳದ ಬಳಿಕ ಆಕೆಯನ್ನು ಬೆಡ್​ರೂಮ್​ಗೆ ಎಳೆದೊಯ್ದು ಕಿರುಕುಳ ನೀಡಿ ವಿದ್ಯುತ್​ ಶಾಕ್​ ನೀಡಿ ಹತ್ಯೆಗೈದಿದ್ದಾನೆ.

ಸ್ವಿಚ್​ಬೋರ್ಡ್​ನಿಂದ ನೇರವಾಗಿ ಲಿವ್ಹಿಂಗ್​ ರೂಮ್​ಗೆ ವೈರ್​ ಎಳೆದುಕೊಂಡು ಕರೆಂಟ್​​ ಶಾಕ್​ ನೀಡಿರುವುದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸಖ ಕುಮಾರಿ ಅವರ ಕೈಗಳು, ತಲೆ ಮತ್ತು ಮುಖದಲ್ಲಿ ಸುಟ್ಟ ಗಾಯಗಳಾಗಿವೆ. ಆದರೆ, ಆರಂಭದಲ್ಲಿ ಕತೆ ಕಟ್ಟಿದ್ದ ಅರುಣ್​, ಕ್ರಿಸ್​ಮಸ್​ ಹಿನ್ನೆಲೆಯಲ್ಲಿ ಮನೆಯಲ್ಲಿ ಅಲಂಕಾರಕ್ಕೆ ಅಳವಡಿಸಿದ್ದ ಲೈಟ್​ನಿಂದ ವಿದ್ಯುತ್​ ತಾಗಿದೆ ಎಂದು ನೆರೆಹೊರೆಯವರಿಗೂ ಮತ್ತು ಆಸ್ಪತ್ರೆಗೂ ಹೇಳಿದ್ದ. ಆದರೆ, ಪರೀಕ್ಷಿಸಿದ ವೈದ್ಯರಿಗೆ ಅರುಣ್​ ಮಾತಿಗೂ ಮತ್ತು ಮೃತದೇಹದ ಸ್ಥಿತಿಗೂ ವ್ಯತ್ಯಾಸ ಕಂಡುಬಂದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.

ಇನ್ನು ಅರುಣ್​ ಮತ್ತು ಸಖ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ, ಇಬ್ಬರ ನಡುವೆ ಒಳ್ಳೆಯ ಬಾಂದವ್ಯ ಇರಲಿಲ್ಲ ಎಂದು ಸಖ ಸಂಬಂಧಿಕರು ಹೇಳಿದ್ದಾರೆ. ಇದೀಗ ತಪ್ಪೊಪ್ಪಿಕೊಂಡಿರುವ ಅರುಣ್​, ನಮ್ಮಿಬ್ಬರ ನಡುವೆ ವಯಸ್ಸಿನ ಅಂತರ ಕುರಿತು ಜನರು ಕೊಂಕು ಮಾತಾಡುತ್ತಿದ್ದರು. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಅಲ್ಲದೆ, ನಾನು ಹಣಕಾಸಿನ ತೊಂದರೆಯಲ್ಲಿದ್ದೆ. ಹಣದ ಅವಶ್ಯಕತೆ ತುಂಬಾ ಇತ್ತು. ಇದೇ ವಿಚಾರಕ್ಕೆ ಜಗಳ ನಡೆಯಿತು. ಅಲ್ಲದೆ, ಆಸ್ತಿಯನ್ನು ಕಬಳಿಸಬಹುದು ಎಂಬ ಉದ್ದೇಶದಿಂದ ಕೊಲೆ ಮಾಡಿದ್ದಾಗಿ ಅರುಣ್​ ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆ ಪೂರ್ವ ನಿಯೋಜಿತವಾಗಿದ್ದು, ಮೊದಲೇ ಅರುಣ್​ ಕೋಣೆಯ ಒಳಗೆ ವೈರ್​ಗಳನ್ನು ಅಳವಡಿಸಿದ್ದ. ಬಳಿಕ ಜಗಳ ತೆಗೆದು ಆಕೆಯನ್ನು ರೂಮಿಗೆ ಎಳೆದೊಯ್ದು ವಿದ್ಯುತ್​ ಶಾಕ್​ ನೀಡಿ ಕೊಲೆ ಮಾಡಿದ್ದ. ಶನಿವಾರ ರಾತ್ರಿಯೇ ಕೊಲೆ ಮಾಡಿ ಭಾನುವಾರ ಬೆಳಗ್ಗೆ ಸಖ ಮೃತಪಟ್ಟಿದ್ದಾಳೆಂದು ನೆರೆಹೊರೆಯವರಿಗೆ ತಿಳಿಸಿದ್ದ. ಆದರೆ, ಪೊಲೀಸ್​ ತನಿಖೆಯಿಂದ ಅರುಣ್​ ಸಿಕ್ಕಿಬಿದ್ದಿದ್ದು, ಭಾನುವಾರ ಬಂಧಿಸಲಾಗಿದೆ. ಅದೇ ದಿನವೇ ಸಖಳ ಅಂತ್ಯಕ್ರಿಯೆಯು ನೆರವೇರಿದ್ದು, ಸೋಮವಾರವಷ್ಟೇ ಆರೋಪಿಯನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ.

Comments are closed.