ರಾಷ್ಟ್ರೀಯ

ಓದು ಎಂದು ಹೇಳಿದ್ದಕ್ಕೆ ಈ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಮನೆಯವರಿಗೆ ಕೊಟ್ಟ ಟೆನ್ಷನ್​ ಏನು ಗೊತ್ತಾ?

Pinterest LinkedIn Tumblr


ಗುಜರಾತ್​: ಅಪ್ಪ-ಅಮ್ಮ ಹಾಗೂ ಅಜ್ಜಿ ‘ಓದು ಓದು’ ಅಂತ ಬೈದರು ಎಂದು ಬೇಜಾರಾದ ಈ ಹುಡುಗ ಒಂದಿಡೀ ವಾರ ಅವರನ್ನೆಲ್ಲ ಟೆನ್ಷನ್​ನಲ್ಲಿ ಇರುವಂಥ ಕಿತಾಪತಿ ಮಾಡಿದ್ದಾನೆ. ಗುಜರಾತ್​ನ ವಡೋದರದಲ್ಲಿನ ಈ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಮನೆಯವರ ಮೇಲೆ ಬೇಸರ ಮಾಡಿಕೊಂಡವನೇ ಸೀದಾ ಗೋವಾಗೆ ಹೋಗಿ ಕ್ಲಬ್​-ಪಬ್​ಗಳಲ್ಲಿ ಎಂಜಾಯ್​ ಮಾಡಿದ್ದಾನೆ.

ಕಳೆದ ವಾರ ಹೇಳದೆ ಕೇಳದೆ ಮನೆಯಿಂದ ಹೊರಟಿದ್ದ ಈತ ಮೊದಲಿಗೆ ವಡೋದರದಿಂದ ಗೋವಾಗೆ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಪಡೆಯಲು ಮುಂದಾಗಿದ್ದ. ಆದರೆ ಆಧಾರ್ ಕಾರ್ಡ್ ಇರದ ಕಾರಣ ಅದು ಸಾಧ್ಯವಾಗಿರಲಿಲ್ಲ. ಬಳಿಕ ಅಲ್ಲಿಂದ ಪುಣೆಗೆ ಬಸ್​ನಲ್ಲಿ ತೆರಳಿದ ಈತ, ನಂತರ ಇನ್ನೊಂದು ಬಸ್​ನಲ್ಲಿ ಗೋವಾ ತಲುಪಿದ್ದ.

ಗೋವಾದಲ್ಲಿ ಸಿಕ್ಕ ಸಿಕ್ಕ ಪಬ್​-ಕ್ಲಬ್​ಗಳಿಗೆ ತೆರಳಿ ಮನಸೋ ಇಚ್ಛೆ ಎಂಜಾಯ್​ ಮಾಡಿದ ಈತ, ಇನ್ನೇನು ಮನೆಯಿಂದ ತಂದಿದ್ದ ಹಣವೆಲ್ಲ ಖಾಲಿಯಾಗಿಬಿಡುತ್ತದೆ ಎನ್ನುವಾಗಲೇ ಅಲ್ಲಿಂದ ವಾಪಸ್ ಹೊರಟಿದ್ದು. ಇತ್ತ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟ ತಂದೆ-ತಾಯಿಗೆ ಮತ್ತೊಂದು ಶಾಕ್​ ಕಾದಿತ್ತು. ಏಕೆಂದರೆ ಮನೆಯಲ್ಲಿಟ್ಟಿದ್ದ 1.5 ಲಕ್ಷ ರೂ. ಕಾಣೆಯಾಗಿತ್ತು. ಅಷ್ಟರಲ್ಲಾಗಲೇ ಹುಡುಗ ಪುಣೆಗೆ ಮರಳಿದ್ದ.

ಮೊಬೈಲ್​ಫೋನ್​ ಜಾಡು ಹಿಡಿದು ಹುಡುಕಲೆತ್ನಿಸಿದ್ದ ಪೊಲೀಸರಿಗೆ ಅದು ಸಾಧ್ಯವಾಗಿರಲಿಲ್ಲ. ಏಕೆಂದರೆ ಇವನು ಮೊಬೈಲ್​ಫೋನ್​ ಸ್ವಿಚ್ಡ್​ ಆಫ್​ ಮಾಡಿಟ್ಟುಕೊಂಡಿದ್ದ. ಡಿ. 25ರಂದು ಪುಣೆಯಲ್ಲಿ ಈತ ಫೋನ್​ ಸ್ವಿಚ್ ಆನ್​ ಮಾಡುತ್ತಿದ್ದಂತೆ ಟ್ರೇಸ್ ಮಾಡಿದ್ದ ಪೊಲೀಸರು ಅಲ್ಲಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪುಣೆ ಪೊಲೀಸರು ಈ ಪೋರನನ್ನು ಪತ್ತೆ ಮಾಡಿ, ಡಿ. 26ರಂದು ವಡೋದರ ಪೊಲೀಸರಿಗೆ ಒಪ್ಪಿಸಿದ ಮೇಲೆ ನಾಪತ್ತೆ ಪ್ರಕರಣ ಸುಖಾಂತಗೊಂಡಿದೆ.

Comments are closed.