ಚೆನ್ನೈ:ಪೊಂಗಲ್ (ಮಕರ ಸಂಕ್ರಾಂತಿ) ಹಬ್ಬದ ಹಿನ್ನೆಲೆಯಲ್ಲಿ ಕೋವಿಡ್ ನ ಹಲವು ಮುಂಜಾಗ್ರತಾ ಕ್ರಮದ ಮಾರ್ಗಸೂಚಿ ಅನ್ವಯ ಜಲ್ಲಿಕಟ್ಟು ಆಚರಿಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
2014ರಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟು, ಕಂಬಳ ಸೇರಿದಂತೆ ದೇಶದ ವಿವಿಧೆಡೆಯ ಹಲವು ಸಾಂಪ್ರದಾಯಿಕ ಕ್ರೀಡೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ವೇಳೆ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು. ನಂತರ ತಮಿಳುನಾಡು ಸರ್ಕಾರ ವಿಧೇಯಕದ ಮೂಲಕ ಕಾನೂನು ಮಾನ್ಯತೆ ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಮಾಡಿಕೊಟ್ಟಿತ್ತು.
ಜಲ್ಲಿಕಟ್ಟು ಕ್ರೀಡೆಗೆ ಸರ್ಕಾರದ ಮಾರ್ಗಸೂಚಿ:
*ಜಲ್ಲಿಕಟ್ಟು ಕ್ರೀಡೆಯಲ್ಲಿ 300ಕ್ಕಿಂತ ಅಧಿಕ ಸ್ಪರ್ಧಾಳುಗಳು ಸೇರಲು ಅನುಮತಿ ಇಲ್ಲ.
*ಬಯಲು ಪ್ರದೇಶದಲ್ಲಿ ನಡೆಯಲಿರುವ ಜಲ್ಲಿಕಟ್ಟು ಕ್ರೀಡೆಯಲ್ಲಿ ಶೇ/50ರಷ್ಟು ಮಾತ್ರ ವೀಕ್ಷಕರಿಗೆ ಅವಕಾಶ.
*ಎಲ್ಲಾ ವೀಕ್ಷಕರಿಗೂ ಥರ್ಮಲ್ ಪರೀಕ್ಷೆ ಕಡ್ಡಾಯ
*ಗೂಳಿ ಮಾಲೀಕರು ಮತ್ತು ಕಾಳಗದಲ್ಲಿ ಭಾಗವಹಿಸುವವರು ಕೂಡಾ ಕೋವಿಡ್ 19 ಪರೀಕ್ಷೆಗೆ ಒಳಗಾಗಬೇಕು
*ಪ್ರತಿಯೊಬ್ಬರಿಗೂ ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
ಏನಿದು ಜಲ್ಲಿಕಟ್ಟು:
ಜಲ್ಲಿಕಟ್ಟು(ಗೂಳಿ ಕಾಳಗ) ತಮಿಳುನಾಡಿನ ಗ್ರಾಮೀಣ ಕ್ರೀಡೆಯಾಗಿದೆ. ಅಷ್ಟೇ ಅಲ್ಲ ತಮಿಳುನಾಡಿನ ಸಂಕ್ರಾಂತಿ(ಪೊಂಗಲ್) ಹಬ್ಬದ ಒಂದು ಸಾಂಸ್ಕೃತಿಕ ಆಚರಣೆ ಕೂಡಾ ಹೌದು. ಕೊಬ್ಬಿದ ಗೂಳಿಯನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ. ಆಗ ಅದರ ಮೇಲೆ ಎರಗುವ ಉತ್ಸಾಹಿ ತರುಣರು, ಯುವಕರು ಗೂಳಿಯ ಭುಜ ಹಿಡಿದುಕೊಂಡು ಒಂದು ಕಡೆ ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರಿಗೆ ಸುತ್ತಮುತ್ತ ಗ್ರಾಮದಲ್ಲಿ ಭರ್ಜರಿ ಗೌರವ ಸಿಗುತ್ತದೆ. ವಿಶೇಷ ಬಹುಮಾನ ಕೂಡ ನೀಡಲಾಗುತ್ತದೆ.