ರಾಷ್ಟ್ರೀಯ

ಕೃಷಿ ಕಾಯ್ದೆ ವಿರೋಧಿಸಿ ಡಿ. 14ರಂದು ಉಪವಾಸ ಸತ್ಯಾಗ್ರಹ: ರೈತ ನಾಯಕರ ಹೇಳಿಕೆ

Pinterest LinkedIn Tumblr


ನವದೆಹಲಿ: ತಮ್ಮ ಬೇಡಿಕೆಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ರೈತ ಮುಖಂಡರು, ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ, ಆದರೆ ಮೊದಲು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚಿಸಬೇಕು. ಇಲ್ಲದಿದ್ದರೆ ಹೊಸ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದರು.

ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಕನ್ವಾಲ್‌ಪ್ರೀತ್ ಸಿಂಗ್ ಪನ್ನು, ರಾಜಸ್ಥಾನದ ಶಹಜಹಾನ್‌ಪುರದಿಂದ ಜೈಪುರ-ದೆಹಲಿ ಹೆದ್ದಾರಿ ಮೂಲಕ ಇಂದು ಬೆಳಗ್ಗೆ 11 ಗಂಟೆಗೆ ಸಾವಿರಾರು ರೈತರು ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಿದರು.

ದೇಶದ ಇತರ ಭಾಗಗಳ ರೈತರು ಸಹ ಇಲ್ಲಿ ಪ್ರತಿಭಟನಾಕಾರರನ್ನು ಸೇರಿಕೊಳ್ಳಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದರು.

ಹೊಸ ಕೃಷಿ ಕಾನೂನುಗಳ ವಿರುದ್ಧ ಡಿಸೆಂಬರ್ 14ರಂದು ರೈತ ಸಂಘದ ಮುಖಂಡರು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಆಂದೋಲನವನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ರೈತರು ಯಾವುದೇ ಕಾರಣಕ್ಕೂ ಹಿಂದಡಿ ಇಡುವುದಿಲ್ಲ ಎಂದು ಪನ್ನು ಹೇಳಿದರು.

Comments are closed.