ಅಹಮದ್‌ನಗರ: ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಜನಾಂದೋಲನ ರೂಪಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಗುರುವಾರ ಎಚ್ಚರಿಕೆ ನೀಡಿದ್ದಾರೆ.
‘ಜನ ಲೋಕಪಾಲ್ ಆಂದೋಲನ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ನಡುಗಿತ್ತು. ಈ ರೈತ ಪ್ರತಿಭಟನೆಯೂ ಅದೇ ಮಾರ್ಗದಲ್ಲಿದೆ ಎಂದು ನನಗೆ ಅನಿಸಿದೆ. ಭಾರತ್ ಬಂದ್ ದಿನದಂದು ನಾನು ನನ್ನ ಹುಟ್ಟೂರು ರಾಳೆಗಣಸಿದ್ಧಿಯಲ್ಲಿ ಆಂದೋಲನ ನಡೆಸಿದೆ. ರೈತರನ್ನು ಬೆಂಬಲಿಸಿ ಒಂದು ದಿನದ ಉಪವಾಸ ಮಾಡಿದ್ದೆ,’ ಎಂದು ಹೇಳಿದರು.
‘ರೈತರ ಬೇಡಿಕೆಗಳನ್ನು ಸರ್ಕಾರ ಒಪ್ಪದಿದ್ದರೆ, ಜನಲೋಕಪಾಲ ಹೋರಾಟದ ರೀತಿಯಲ್ಲೇ ಧರಣಿ ಕೂರುತ್ತೇನೆ,’ ಎಂದು ಅವರು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಿರೋಧಿಸಿ ದೇಶದ ಹಲವೆಡೆ ಈಗಾಗಲೇ ರೈತರಿಂದ ಪ್ರತಿಭಟನೆಗಳು ನಡೆದಿವೆ. ಕಳೆದ ಹಲವು ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮೂಲದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಚಳವಳಿ ತೀವ್ರಗೊಂಡಿದೆ.
ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂಬುದು ರೈತರ ಮುಖ್ಯ ಬೇಡಿಕೆಯಾಗಿದೆ.