ರಾಷ್ಟ್ರೀಯ

ಇಲ್ಲಿ ವಧುವಿಗೆ ತಾಳಿ ಕಟ್ಟುವುದು ಹೆಣ್ಣು: ಮದುವೆ ಮುಗಿಯುವವರೆಗೂ ಮದುಮಗ ಕಲ್ಯಾಣ ಮಂಟಪಕ್ಕೆ ಹೋಗುವಂತಿಲ್ಲ!

Pinterest LinkedIn Tumblr


ಸುರ್ಖೇದಾ (ಗುಜರಾತ್​): ವಿವಾಹ ವಿಷಯದಲ್ಲಿ ನಗು ತರಿಸುವಂಥ ಸಂಪ್ರದಾಯ ಇರುವುದು ಗುಜರಾತ್‍ನ ಸುರ್ಖೇದಾ, ಸನಾದಾ ಮತ್ತು ಅಂಬಲಾ ಗ್ರಾಮದಲ್ಲಿನ ಆದಿವಾಸಿಗಳದ್ದು. ಇಲ್ಲೊಂದು ವಿಚಿತ್ರ ಪದ್ಧತಿದೆ. ಅದೇನೆಂದರೆ ವಧುವಿಗೆ ಸಿಂಧೂರ ಹಚ್ಚುವುದು, ತಾಳಿ ಕಟ್ಟುವುದು ಎಲ್ಲವೂ ಗಂಡನಲ್ಲ ಬದಲಿಗೆ ಆತನ ಸಹೋದರಿ! ಒಂದು ವೇಳೆ ಅವನಿಗಾನದರೂ ಅಕ್ಕ-ತಂಗಿ ಇಲ್ಲದಿದ್ದರೆ ಅವನ ಕುಟುಂಬದಲ್ಲಿ ಮದುವೆಯಾಗದೇ ಇರುವ ಯಾವುದಾದರೂ ಯುವತಿ ಇದ್ದಳೆ ಅವಳು ಈ ಕಾರ್ಯ ಮಾಡಬೇಕು.

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಇನ್ನೂ ಇದೆ ಕುತೂಹಲದ ಕಥೆ. ಇಲ್ಲಿಯ ಜನಾಂಗದಲ್ಲಿ ತನ್ನದೇ ಮದುವೆಗೆ ಪಾಪ ವರ ಮಹಾಶಯ ಹೋಗುವ ಹಾಗೆಯೇ ಇಲ್ವಂತೆ! ಅವನು ಮದುವೆ ಮುಗಿಯುವವರೆಗೆ ಮನೆಯಲ್ಲಿಯೇ ಇರಬೇಕು. ಸಂಪ್ರದಾಯದ ಪ್ರಕಾರ ಶೇರ್ವಾನಿ ಹಾಕಿಕೊಂಡು ಸೆಹರಾದಿಂದ (ಹೂವಿನ ಮಾಲೆ) ಮುಖವನ್ನು ಯಾರಿಗೂ ತೋರಿಸದಂತೆ ಮುಚ್ಚಿಕೊಂಡು ಕುಳಿತಿರಬೇಕು. ವರ ಅತ್ತಿತ್ತ ಕದಲದಂತೆ ಆತನ ತಾಯಿ ಅವನ ಪಕ್ಕದಲ್ಲಿಯೇ ಇರುತ್ತಾಳೆ.

ಮದುವೆ ಮುಗಿದ ಬಳಿಕ ವರನ ಸಹೋದರಿ ವಧುವನ್ನು ಅತ್ತೆ ಮನೆಯಿಂದ ಕರೆದುಕೊಂಡು ಅಣ್ಣನಿಗೆ ಒಪ್ಪಿಸುವಳು. ಒಂದು ವೇಳೆ ಈ ಸಂಪ್ರದಾಯ ಪಾಲಿಸದೇ ಮದುವೆಯಾದರೆ ಅವರ ಸಂಬಂಧ ಮುರಿದು ಬೀಳುತ್ತದೆ ಎಂಬ ನಂಬಿಕೆ ಇದೆಯಂತೆ.

ಅಷ್ಟಕ್ಕೂ ಇಂಥ ಆಚರಣೆ ಹಿಂದೆ ಕುತೂಹಲ ಕಥೆಯೂ ಇದೆ. ಅದೇನೆಂದರೆ ಈ ಗ್ರಾಮಗಳ ದೈವ ಅಪ್ಪಟ ಬ್ರಹ್ಮಾಚಾರಿಯಂತೆ. ಆದ್ದರಿಂದ ಮದುವೆ ಗಂಡಸಿನ ಜತೆಯಾದರೂ ತಾಳಿ ಕಟ್ಟುವುದು ಹೆಣ್ಣಂತೆ. ಅಲ್ಲಿಗೆ ಹೆಣ್ಣಿಗೆ ಹೆಣ್ಣಿನ ಜತೆ ಮದುವೆ ಮಾಡಿದಂತೆ, ಇದರಿಂದ ತಮ್ಮ ದೇವರು ಮುನಿಸಿಕೊಳ್ಳುವುದಿಲ್ಲ ಎಂಬ ನೆಮ್ಮದಿ ಈ ಗ್ರಾಮಸ್ಥರದ್ದು.

Comments are closed.