ಗಾಂಧಿನಗರ: ಗುಜರಾತ್‍ನ ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ಅವರು ಕೊರೊನಾದಿಂದಾಗಿ ನಿಧನ ಹೊಂದಿದ್ದಾರೆ.
ಚೆನ್ನೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಈ ಮೂಲಕ ಗುಜರಾತ್ ಇಬ್ಬರು ರಾಜ್ಯಸಭಾ ಸದಸ್ಯರನ್ನು ಕಳೆದುಕೊಂಡಂತಾಗಿದೆ. ನವೆಂಬರ್ 26ರಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್‍ನ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ಕೊನೆಯುಸಿರೆಳೆದಿದ್ದರು.
ಭಾರದ್ವಾಜ್ ಅವರು ರಾಜ್‍ಕೋಟ್‍ನ ಬಿಜೆಪಿ ಹಿರಿಯ ನಾಯಕರಾಗಿದ್ದು, ವೃತ್ತಿಯಲ್ಲಿ ವಕೀಲರಾಗಿದ್ದರು. ಜುಲೈನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಭಾರದ್ವಾಜ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗುತ್ತಿದ್ದಂತೆ ರಾಜ್‍ಕೋಟ್‍ನ ಆಸ್ಪತ್ರೆಯ ಐಸಿಯುನಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಎರಡು ತಿಂಗಳ ಹಿಂದೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಗುಜರಾತ್ ರಾಜ್ಯಸಭಾ ಸದಸ್ಯರಾಗಿದ್ದ ಅಭಯ್ ಭಾರದ್ವಾಜ್ ಅವರು ವಕೀಲರಾಗಿದ್ದುಕೊಂಡು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ರಾಷ್ಟ್ರದ ಅಭಿವೃದ್ಧಿ ಬಗ್ಗೆ ಉತ್ಸಾಹ, ಒಳನೋಟ ಹೊಂದಿದ್ದ ಮನಸ್ಸನ್ನು ಕಳೆದುಕೊಂಡಿರುವುದು ವಿಷಾದಕರ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಂತಾಪವನ್ನು ಸೂಚಿಸುತ್ತೇನೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ರಾಜಸಮಂದ್ ಕ್ಷೇತ್ರದ ಬಿಜೆಪಿ ನಾಯಕಿ, ಶಾಸಕಿ ಕಿರಣ್ ಮಹೇಶ್ವರಿ(59) ಸಹ ಕೊರೊನಾಗೆ ಬಲಿಯಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟಿದ್ದರು.