ರಾಷ್ಟ್ರೀಯ

ಈ ಹಳ್ಳಿಯಲ್ಲಿ ವಜ್ರ ಪತ್ತೆ; ಆಯ್ದುಕೊಳ್ಳಲು ಮುಗಿಬಿದ್ದ ಜನತೆ

Pinterest LinkedIn Tumblr


ನಾಗಾಲ್ಯಾಂಡ್​ನ ಮೊನ್​ ಜಿಲ್ಲೆಯ ವಾಂಚಿಂಗ್​ ಎಂಬಲ್ಲಿ ಭೂಮಿಯಲ್ಲಿ ವಜ್ರಗಳು ಸಿಗುತ್ತಿವೆ ಎಂಬ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ವಜ್ರವನ್ನು ಆಯ್ದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.

ಇಲ್ಲಿನ ಭೂಮಿಯಲ್ಲಿ ವಜ್ರದ ನಿಕ್ಷೇಪ ಪತ್ತೆಯಾಗಿದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಇದನ್ನು ನಂಬಿದ ಗ್ರಾಮಸ್ಥರು, ಭೂಮಿಯನ್ನು ಅಗೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದನ್ನು ಗಮನಿಸಿದ ಸರ್ಕಾರ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿದೆ. ವಿಡಿಯೋದಲ್ಲಿ ಗ್ರಾಮಸ್ಥರು ಮಣ್ಣು ಅಗೆಯುವ ದೃಶ್ಯದಲ್ಲಿ ಕೆಲವರ ಕೈಯಲ್ಲಿ ವಜ್ರದಂತಹ ಸ್ಪಟಿಕದ ವಸ್ತು ಹೊಳೆಯುತ್ತಿರುವುದು ಕಂಡು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಈ ಭೂಮಿಯಲ್ಲಿ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ನಿಖರ ವರದಿಯಾಗಿಲ್ಲ. ಆದರೆ, ಈ ಕುರಿತು ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ವರದಿಯನ್ನು ಸಲ್ಲಿಸಲಿದ್ದೇವೆ ಎಂದು ಇಲಾಖೆಯ ನಿರ್ದೇಶಕ ಎಸ್​ ಮಾನೆನ್​ ತಿಳಿಸಿದ್ದಾರೆ. ಇನ್ನು ಈ ತಂಡ ನ.30 ಅಥವಾ ಡಿ. 1ರಂದು ಗ್ರಾಮಕ್ಕೆ ತೆರಳಲಿದ್ದು, ವಾಸ್ತವತೆ ತಿಳಿಯಲಿದೆ.

ಗ್ರಾಮಸ್ಥರು ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಕೆಲಸ ಮಾಡುವಾಗ ಸ್ಪಟಿಕದಂತೆ ಹೊಳೆಯುವ ವಸ್ತು ಪತ್ತೆಯಾಗಿದೆ. ಇದನ್ನೇ ವಜ್ರ ಎಂದು ಭಾವಿಸಿದ್ದಾರೆ. ಬಳಿಕ ಇತರರಿಗೆ ಮಾಹಿತಿ ನೀಡಿದ್ದು, ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ ಎಂದು ಇಲ್ಲಿನ ಉಪ ಆಯುಕ್ತರಾಗಿರುವ ತವಸೀಲನ್​ ಕೆ ತಿಳಿಸಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಅಧಿಕಾರಿಗಳು ಇವುಗಳನ್ನು ವಜ್ರ ಎಂದು ನಂಬಲು ಅಸಾಧ್ಯ. ಕಾರಣ ಇವು ಭೂಮಿಯ ಮೇಲ್ಮೈನಲ್ಲಿ ಪತ್ತೆಯಾಗಿದೆ. ಇದು ಸ್ಪಟಿಕ ರೂಪದ ಕಲ್ಲಾಗಿದ್ದರೂ ಇದರಿಂದ ಗ್ರಾಮಸ್ಥರಿಗೆ ಪ್ರಯೋಜನವಾಗಲಿದೆ . ಜನರ ಈ ಕುತೂಹಲಕ್ಕೆ ತೆರೆಎಳೆಯಬೇಕೆಂದರೆ, ಇವುಗಳ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

ಇನ್ನು ಈ ವಿಡಿಯೋ ವೈರಲ್​ ಆಗಿದ್ದು, ಚರ್ಚೆ ಹುಟ್ಟುಹಾಕಿದೆ. ಆದರೆ, ಭೂ ವಿಜ್ಞಾನಿಗಳು ಇಲ್ಲಿ ವಜ್ರ ಸಿಕ್ಕಿದೆ ಎಂಬ ವಿಷಯವನ್ನು ತಳ್ಳಿ ಹಾಕಿದ್ದಾರೆ, ಈ ಪ್ರದೇಶದಲ್ಲಿ ವಜ್ರದ ಕಲ್ಲುಗಳು ಸಿಕ್ಕಿರುವ ಬಗ್ಗೆ ದಾಖಲೆ ಇಲ್ಲ ಎಂದಿದ್ದಾರೆ.

ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಈ ಬಗ್ಗೆ ಪರೀಶೀಲಿಸಲು ಸುತ್ತಮುತ್ತಲ ಗ್ರಾಮಸ್ಥರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆ ಈ ಕುರಿತು ಯಾವುದೇ ವಿಡಿಯೋ ಪೋಸ್ಟ್​ ಮಾಡದಂತೆ ಅಧಿಕಾರಿಗಳು ವಾಚಿಂಗ್​ ಗ್ರಾಮ ಪರಿಷತ್​ ನೋಟಿಸ್​ ನೀಡಿದೆ. ಅಲ್ಲದೇ ಬೇರೆ ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶಿಸುವುದನ್ನು ಕೂಡ ನಿಷೇಧ ವಿಧಿಸಲಾಗಿದೆ.

Comments are closed.