ರಾಷ್ಟ್ರೀಯ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್ ನಿಧನ; ಮೋದಿ, ರಾಹುಲ್ ಗಾಂಧಿ ಸಂತಾಪ

Pinterest LinkedIn Tumblr

ನವದೆಹಲಿ: ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಕೆಲ ವಾರಗಳ ಹಿಂದಷ್ಟೇ ಅಹ್ಮದ್ ಪಟೇಲ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಂತೆ ಗುರುಗ್ರಾಮದ ಮೆಡಂತಾ ಅಸ್ಪತ್ರೆಗೆ ದಾಖಲಾಗಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮುನ್ನ ಫರೀದಾಬಾದ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

ಪ್ರಧಾನಿ ಮೋದಿ, ಸಂಸದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಮಗೆ ಕೊರೋನಾ ಸೋಂಕು ತಗುಲಿರುವ ಕುರಿತು ಅಕ್ಟೋಬರ್ 1 ರಂದು ಸ್ವತಃ ಅಹ್ಮದ್ ಪಟೇಲ್ ಅವರೇ ಹೇಳಿಕೊಂಡಿದ್ದರು. ಅಲ್ಲದೆ ಹೋಮ್ ಐಸೋಲೇಷನ್ ನಲ್ಲಿರುವುದಾಗಿಯೂ ಮಾಹಿತಿ ನೀಡಿದ್ದರು. ಬಳಿಕ ಆರೋಗ್ಯದಲ್ಲಿ ಚೇತರಿಕೆಗಳು ಕಂಡು ಬರದ ಹಿನ್ನೆಲೆಯಲ್ಲಿ ಫರೀದಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಚೇತರಿಕೆ ಕಂಡು ಬರದ ಹಿನ್ನೆಲಯೆಲ್ಲಿ ಮೆಡಂತಾ ಆಸ್ಪತ್ರೆಗೆ ದಾಖಲಾಗಿದ್ದರು.

71 ವರ್ಷದ ಅಹ್ಮದ್ ಪಟೇಲ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದ ಅಹ್ಮದ್ ಪಟೇಲ್ ಅವರು, ಕಾಂಗ್ರೆಸ್’ನ ಹಿರಿಯ ನೀಯಕರು ಹಾಗೂ ಸೋನಿಯಾ ಗಾಂಧಿ ಕುಟುಂಬದ ಆಪ್ತರಾಗಿದ್ದರು. ಆಸ್ಪತ್ರೆಗೆ ದಾಖಲಾದಾಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಂಸದ ಶಶಿ ತರೂರ್ ಅವರು ಟ್ವೀಟ್ ಮಾಡಿ ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು.

1949ರ ಆ. 21ರಂದು ಗುಜರಾತ್‌ನಲ್ಲಿ ಜನಿಸಿದ್ದ ಅಹ್ಮದ್‌ ಪಟೇಲ್ ಲೋಕಸಭೆಗೆ 3 ಬಾರಿ ಆಯ್ಕೆಯಾಗಿದ್ದರು. 5 ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಜೊತೆಗೆ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಆಗಿದ್ದರು.

Comments are closed.