ರಾಷ್ಟ್ರೀಯ

ಮಕ್ಕಳಾಗಲು ಹರಕೆ ಕಟ್ಟಿಕೊಳ್ಳುವ ಮಹಿಳೆಯರ ಬೆನ್ನಿನ ಮೇಲೆ ನಡೆಯುವ ಅರ್ಚಕರು

Pinterest LinkedIn Tumblr


ನವದೆಹಲಿ: ಮಕ್ಕಳಾಗದವರು ಮಕ್ಕಳಾಗಲಿ ಎಂದು ಪೂಜೆಗಳನ್ನು ಮಾಡಿ, ಹರಕೆ ಕಟ್ಟಿಕೊಳ್ಳುವುದು ಇಂದಿಗೂ ನಿಂತಿಲ್ಲ. ಛತ್ತೀಸ್​ಗಢದಲ್ಲಿ ಅದೇ ರೀತಿ ಮಕ್ಕಳಾಗದವರು ಬಂದು ವಿಚಿತ್ರವಾದ ಹರಕೆಯೊಂದನ್ನು ಕಟ್ಟಿಕೊಳ್ಳುತ್ತಾರೆ.

ಛತ್ತೀಸ್​ಗಢದ ಧಮಂತರಿ ಜಿಲ್ಲೆಯ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ನಂಬಿಕೆಯಿದೆ. ಇಲ್ಲಿನ ಅರ್ಚಕ ಮಹಿಳೆಯರ ಮೈಮೇಲೆ ನಡೆದರೆ ಅವರಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಇಲ್ಲಿಗೆ ಮಕ್ಕಳಾಗದ ಸಾವಿರಾರು ಮಹಿಳೆಯರು ಬಂದು ಅಂಗಳದಲ್ಲಿ ಮಲಗುತ್ತಾರೆ. ಅವರ ಬೆನ್ನಿನ ಮೇಲೆ ಅರ್ಚಕ ನಡೆಯುತ್ತಾರೆ. ಮಹಿಳೆಯರ ಮೇಲೆ ಅರ್ಚಕ ನಡೆಯುತ್ತಿರುವ ಆ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿ ನಡೆಯುವ ಮಧಾಯ್ ಮೇಳ ಎಂಬ ಉತ್ಸವದಲ್ಲಿ ಪ್ರತಿವರ್ಷ ಮಕ್ಕಳಾಗದ ಮಹಿಳೆಯರು ಬಂದು ಈ ಹರಕೆ ತೀರಿಸುತ್ತಾರೆ. ದೀಪಾವಳಿ ಮುಗಿದ ಬಳಿಕ ಮೊದಲ ಶುಕ್ರವಾರ ನಡೆಯುವ ಈ ಉತ್ಸವದಲ್ಲಿ ಅಂಗಾರಮೂರ್ತಿ ದೇವಿಯ ದರ್ಶನಕ್ಕೆ ಬರುವ ಮಹಿಳೆಯರು ಮಕ್ಕಳಾಗಲು ಅರ್ಚಕರ ಕಾಲ್ತುಳಿತಕ್ಕೆ ಒಳಗಾಗುತ್ತಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ಸುಮಾರು 500 ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬರುತ್ತಿದೆ. ಆಗಿನಿಂದಲೂ ಮಕ್ಕಳಾಗದವರು ಇಲ್ಲಿಗೆ ಬಂದು ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಈ ಪದ್ಧತಿಯಿಂದ ತಮಗೆ ಮಕ್ಕಳಾಗುತ್ತದೆ ಎಂದು ಸ್ಥಳೀಯರು ಬಲವಾಗಿ ನಂಬಿದ್ದಾರೆ. ಈ ಉತ್ಸವದ ಬಳಿಕ ಅನೇಕ ಮಹಿಳೆಯರು ಗರ್ಭ ಧರಿಸಿದ ಉದಾಹರಣೆಗಳೂ ಇವೆ ಎನ್ನುತ್ತಾರೆ ಸ್ಥಳೀಯರು.

ವೈರಲ್ ಆಗಿರುವ ವಿಡಿಯೋದಲ್ಲಿ ಸುಮಾರು 200ಕ್ಕೂ ಅಧಿಕ ಮಹಿಳೆಯರು ಮೈದಾನದಲ್ಲಿ ಮಲಗಿಕೊಂಡಿದ್ದಾರೆ. ಸಾಲಾಗಿ ಮಲಗಿರುವ ಅವರ ಬೆನ್ನಿನ ಮೇಲೆ ಅರ್ಚಕರು ಮಂತ್ರ ಪಠಿಸುತ್ತಾ, ನಡೆಯುತ್ತಿದ್ದಾರೆ. ಸುತ್ತಲೂ ನಿಂತ ಅವರ ಕುಟುಂಬಸ್ಥರು ದೇವರನ್ನು ಬೇಡಿಕೊಳ್ಳುತ್ತಿದ್ದಾರೆ. ಈ ವಿಡಿಯೋಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

Comments are closed.