ನವದೆಹಲಿ: ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದಾರೆ. 2018ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಮಧ್ಯಂತರ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿತ್ತು.
ಗೋಸ್ವಾಮಿ ತಮ್ಮ ಮನವಿಯಲ್ಲಿ ವಕೀಲ ನಿರ್ನಿಮೇಶ್ ದುಬೆ ಅವರ ಮೂಲಕ ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸ್, ಕೇಂದ್ರ ಸರ್ಕಾರ ಮತ್ತಿತರನ್ನು ಇದಕ್ಕೆ ಪ್ರತಿವಾದಿಗಳನ್ನಾಗಿ ಹೆಸರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರಿಗೆ ಮಧ್ಯಂತರ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದ್ದು, ಜಾಮೀನು ಪಡೆಯಲು ಕೆಳ ನ್ಯಾಯಾಲಯವನ್ನು ಸಂಪರ್ಕಿಸುವಂತೆ ನಿರ್ದೇಶನ ನೀಡಿತ್ತು. ನ್ಯಾಯಮೂರ್ತಿ ಎಸ್.ಎಸ್. ಶಿಂಧೆ ಮತ್ತು ನ್ಯಾಯಮೂರ್ತಿ ಎಂ.ಎಸ್. ಕಾರ್ನಿಕ್ ಅವರ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ನಿನ್ನೆ, ಗೋಸ್ವಾಮಿ ಅವರು ರಾಯಘಡ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಮೇ 2018 ರಲ್ಲಿ ಅಲಿಬಾಗ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಸಾವಿನ ಪ್ರಕರಣದಲ್ಲಿ ಆರೋಪಿಗಳಾದ ಗೋಸ್ವಾಮಿ ಮತ್ತು ಇತರ ಇಬ್ಬರು ವ್ಯಕ್ತಿಗಳ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಗೋಸ್ವಾಮಿ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿತ್ತು. ಆತನೊಂದಿಗೆ ಇತರ ಇಬ್ಬರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೆಳ ನ್ಯಾಯಾಲಯ ಒಳಪಡಿಸಿದೆ. ನವೆಂಬರ್ 4 ರ ಮುಂಜಾನೆ ಗೋಸ್ವಾಮಿಯನ್ನು ಬಂಧಿಸಲು ಅವರ ನಿವಾಸಕ್ಕೆ ಪ್ರವೇಶಿಸಿದ ಮುಂಬೈ ಪೊಲೀಸ್ ಅಧಿಕಾರಿಗಳಿಂದ ತನ್ನ ಅತ್ತೆ, ಮಾವ, ಮಗ ಮತ್ತು ಹೆಂಡತಿಗೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆದು ಗೋಸ್ವಾಮಿ ಆರೋಪಿಸಿದ್ದರು.