ರಾಷ್ಟ್ರೀಯ

ಆನ್‌ಲೈನ್‌ ಶಿಕ್ಷಣಕ್ಕೆ ಲ್ಯಾಪ್‌ಟಾಪ್‌ ಕೊಳ್ಳಲಾಗದೇ ಬಿ.ಎಸ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

Pinterest LinkedIn Tumblr


ಹೈದರಾಬಾದ್‌: ಕುಟುಂಬದ ಆರ್ಥಿಕ ಸಂಕಷ್ಟವು ತನ್ನ ವಿದ್ಯಾಭ್ಯಾಸಕ್ಕೆ ಎಲ್ಲಿ ತೊಡಕಾಗುವುದೋ ಎಂಬ ಚಿಂತೆಯಲ್ಲಿ ಮನನೊಂದು ತೆಲಂಗಾಣದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಿ.ಎಸ್ಸಿ ಗಣಿತ ವಿಷಯದಲ್ಲಿ ದಿಲ್ಲಿಯ ಲೇಡಿ ಶ್ರೀರಾಮ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಐಶ್ವರ್ಯಾ ರೆಡ್ಡಿ ತನ್ನ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್‌ ನಗರದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಕಾಲೇಜಿನ ಹಾಸ್ಟೆಲ್‌ ಆಡಳಿತ ಮಂಡಳಿಯು, ಹಣ ಕಟ್ಟಲಾಗದಿದ್ದಕ್ಕೆ ತೆರವಿಗೆ ಸೂಚನೆ ನೀಡಿದ್ದು ಹಾಗೂ ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಸಹ ಕೊಳ್ಳಲಾಗದಂತಹ ಪರಿಸ್ಥಿತಿ ಎದುರಾಗಿದ್ದರಿಂದ ಆಕೆ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದುಬಂದಿದೆ. ಈ ಮಧ್ಯೆರಂಗಾರೆಡ್ಡಿ ಜಿಲ್ಲೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘಟನೆಯು, ಇದೊಂದು ‘ಸಾಂಸ್ಥಿಕ ಕೊಲೆ’ ಎಂದು ಆಪಾದಿಸಿ ಪ್ರತಿಭಟನೆ ನಡೆಸಿದೆ.

ಕ್ಷಮಿಸಿಬಿಡಿ

”ನನ್ನಿಂದ ನನ್ನ ಕುಟುಂಬ ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ. ಕುಟುಂಬಕ್ಕೆ ನನ್ನ ಶಿಕ್ಷಣವು ಹೊರೆಯಾಗಿದ್ದು, ವ್ಯಾಸಂಗ ಮುಂದುವರಿಸಲು ಸಾಧ್ಯವಿಲ್ಲದೇ ಹೋದರೆ ನನಗೆ ಬದುಕಲು ಸಾಧ್ಯವಿಲ್ಲ. ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ” ಎಂದು ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೋಟಾರ್‌ ಸೈಕಲ್‌ ಮೆಕ್ಯಾನಿಕ್‌ ಆಗಿರುವ ಐಶ್ವರ್ಯಾಳ ತಂದೆ, ”ನನ್ನ ಮಗಳು ಐಎಎಸ್‌ ಅಧಿಕಾರಿಯಾಗುವ ಕನಸು ಹೊಂದಿದ್ದಳು. ಕೋವಿಡ್‌ನಿಂದ ಫೆಬ್ರವರಿಗೆ ಮನೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಆನ್‌ಲೈನ್‌ ತರಗತಿಗೆ ಅನುಕೂಲಕರವಾಗಲು ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಖರೀದಿಸಿಕೊಡುವಂತೆ ಕೇಳಿಕೊಂಡಿದ್ದರೂ ಆರ್ಥಿಕ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ,” ಎಂದು ಬೇಸರ ಹೊರಹಾಕಿದ್ದಾರೆ.

”ಪಿಯುಸಿಯಲ್ಲಿ ಶೇಕಡ 98.5 ಅಂಕಗಳನ್ನು ಪಡೆದಿದ್ದ ಮಗಳನ್ನು ಪ್ರತಿಷ್ಠಿತ ಕಾಲೇಜಿಗೆ ಸೇರಿಸಲೆಂದು ನನ್ನ ಬಳಿ ಇದ್ದ ಒಂದು ಚಿಕ್ಕ ಮನೆಯನ್ನೂ 2 ಲಕ್ಷ ರೂ.ಗೆ ಅಡವಿಟ್ಟು ಹಣ ಹೊಂದಿಸಿದ್ದೆ. ಕಿರಿಯ ಪುತ್ರಿಯ ಶಿಕ್ಷಣವನ್ನೂ ಮೊಟಕುಗೊಳಿಸಿದ್ದೆ. ಆದರೆ ನನ್ನ ಕನಸುಗಳೆಲ್ಲವೂ ಈಗ ನುಚ್ಚುನೂರಾಗಿದೆ,” ಎಂದು ತಂದೆ ಕಣ್ಣೀರು ಹಾಕಿದ್ದಾರೆ.

”ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಇನ್‌ಸ್ಪೈರ್‌ ವಿದ್ಯಾರ್ಥಿವೇತನವನ್ನು ಪಡೆದಿದ್ದರೂ ಹಣ ಮಾತ್ರ ಜಮೆಯಾಗಲೇ ಇಲ್ಲ. ಅಕ್ಟೋಬರ್‌ನಲ್ಲಿಹಾಸ್ಟೆಲ್‌ ಕೊಠಡಿ ತೆರವುಗೊಳಿಸುವಂತೆ ಸೂಚನೆ ಬಂದಿದ್ದರಿಂದ ಆಕೆ ನೊಂದಿದ್ದಳು. ಪ್ರತ್ಯೇಕ ಬಾಡಿಗೆ ಕೊಠಡಿಗೆ ಕನಿಷ್ಠ 15 ರೂ. ಪಾವತಿಸಬೇಕಿತ್ತು. ಆಕೆಯನ್ನು ದಿಲ್ಲಿಗೆ ಕಳುಹಿಸಲು ರೈಲಿನ ಟಿಕೆಟ್‌ಗೂ ನಮ್ಮ ಬಳಿ ಹಣವಿರಲಿಲ್ಲ,” ಐಶ್ವರ್ಯಾಳ ತಂದೆ ಹೇಳಿದ್ದಾರೆ.

Comments are closed.