ತಿರುವನಂತಪುರಂ: ಕೇರಳದ ಕೊಟ್ಟಾಯಂನ ವ್ಯಕ್ತಿನೊಬ್ಬ ಕೆಲವು ವರ್ಷಗಳಿಂದ ಮದುವೆಯಾಗಲು ಯುವತಿಯನ್ನು ಹುಡುಕಿ ಸುಸ್ತಾಗಿದ್ದಾರೆ. ವಧು-ವರರ ಕೇಂದ್ರದಲ್ಲಿ, ವೆಬ್‌ಸೈಟ್‌ಗಳಲ್ಲಿ ಪ್ರಯತ್ನಿಸಿದರೂ ಆತನಿಗೆ ವಧು ಸಿಗಲಿಲ್ಲ. ಈತ ಕೊನೆಗೆ ತನ್ನದೇ ಆದ ಅದ್ಭುತ ಪ್ಲಾನ್ ಮಾಡಿ ಯಶಸ್ವಿಯಾಗಿದ್ದಾನೆ.
ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ತನ್ನದೇ ಆದ ವುಡ್ ಮಿಲ್ ಹೊಂದಿರುವ 35 ವರ್ಷದ ಅನೀಶ್ ಸೆಬಾಸ್ಟೀಯನ್, ತನ್ನದೇ ಮಾಲೀಕತ್ವದ ಮರದ ಮಿಲ್‍ನ ಹೊರಗಡೆ ‘ವಧು ಬೇಕಾಗಿದ್ದಾಳೆ’ ಎಂಬ ಫ್ಲೆಕ್ಸ್ (Flex) ಹಾಕಿಸಿಬಿಟ್ಟಿದ್ದಾನೆ.
ವಧು (Bride) ಹುಡುಕುತ್ತಿದ್ದೇನೆ. ಪ್ರೀತಿಯೇ ಮುಖ್ಯ ಎಂಬ ಯೋಚನೆಯಲ್ಲಿ ಇರುವ, ಯಾವುದೇ ಬೇಡಿಕೆಗಳಿಲ್ಲದ, ನಮ್ಮ ಸಂಸ್ಕೃತಿಯ ಜತೆಗೂಡಿ ಸಾಗುವಂಥ ವಧು ಬೇಕಾಗಿದ್ದಾಳೆ. ಇಷ್ಟವಿದ್ದರೆ ಈ ಸಂಖ್ಯೆ ಸಂಪರ್ಕಿಸಿ’ ಎಂದು ಫ್ಲೆಕ್ಸ್‌ನಲ್ಲಿ ಯುವಕ ಬರೆಸಿದ್ದಾನೆ.
ಈತ ಫ್ಲೆಕ್ಸ್ ಹಾಕಿದ್ದು ಅವರ ಮಿಲ್ ಹೊರಗೆ ಮಾತ್ರ. ಆದರೆ ಈತನ ಅದೃಷ್ಟ ಖುಲಾಯಿಸಿ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಟ್ಟಿದೆ. ಇದೀಗ ಮದುವೆಗಾಗಿ ಅನೇಕ ಮಂದಿ ಈತನನ್ನು ಸಂಪರ್ಕಿಸುತ್ತಿದ್ದಾರಂತೆ!
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅನೀಶ್ ಎಲ್ಲಾ ಕಡೆಗಳಲ್ಲಿಯೂ ಹುಡುಗಿಯನ್ನು ಹುಡುಕಿ ಹುಡುಕಿ ಸುಸ್ತಾದ ಮೇಲೆ ಈ ಪ್ಲ್ಯಾನ್ ಮಾಡಿದ್ದೇನೆ. ಫೋಟೋ ತೆಗೆಸಿ, ಡಿಸೈನ್ ಮಾಡಿಸಿ, ಅದರಲ್ಲೇ ವಾಟ್ಸಪ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಫ್ಲೆಕ್ಸ್ ಹಾಕಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿಬಿಟ್ಟಿದೆ, ನನಗೇ ಅಚ್ಚರಿಯಾಯಿತು. ಅನೇಕ ಮಂದಿ ಬಂದಿದ್ದಾರೆ. ವಿದೇಶದಿಂದಲೂ ಕೆಲವರು ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ ಈ ರೀತಿ ಸಂಪರ್ಕಕ್ಕೆ ಬಂದವರು ಯಾಕೋ ನನಗೆ ಸರಿ ಅನ್ನಿಸಲಿಲ್ಲ. ಜೀವನಪೂರ್ತಿ ಬಾಳಿ ಬದುಕಬೇಕಾದವರನ್ನು ಹುಡುಕುತ್ತಿರೋದಲ್ವಾ. ಆದ್ದರಿಂದ ಯೋಚನೆ ಮಾಡಿ ಮುಂದಿನ ಹೆಜ್ಜೆ ಇಡುತ್ತಿದ್ದೇನೆ ಎಂದು ಹೇಳಿದ್ದಾರೆ.