ರಾಷ್ಟ್ರೀಯ

ಐಟಿ ವಲಯ: ‘ವರ್ಕ್‌ ಫ್ರಮ್‌ ಹೋಮ್‌’ ಕಾಯಂಗೆ ನಿರ್ಧಾರ!

Pinterest LinkedIn Tumblr


ಹೊಸದಿಲ್ಲಿ: ದೇಶವನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವನ್ನಾಗಿಸಲು, ಮಾಹಿತಿ ತಂತ್ರಜ್ಞಾನ, ಬಿಪಿಒ ವಲಯದ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲ ಉದಾರೀಕರಣ ನೀತಿಗೆ ಕೇಂದ್ರ ಸರಕಾರ ಗುರುವಾರ ಚಾಲನೆ ನೀಡಿದೆ.

ದೂರ ಸಂಪರ್ಕ ಇಲಾಖೆಯ ಇತರ ಸೇವಾ ಪೂರೈಕೆ ( ಒಎಸ್‌ಪಿ) ಕುರಿತ ಮಾರ್ಗದರ್ಶಿಯನ್ನು ಕೇಂದ್ರ ಸರಕಾರ ಸರಳಗೊಳಿಸಿದೆ. ಇದರ ಪರಿಣಾಮ ಐಟಿ ಮತ್ತು ಬಿಪಿಒ ವಲಯದ ಕಂಪನಿಗಳಿಗೆ, ಹಲವು ಪರವಾನಗಿ, ನೋಂದಣಿಗಳ ಪ್ರಕ್ರಿಯೆಗಳು ರದ್ದಾಗಲಿವೆ. ಇದರಿಂದ ಐಟಿ ಕಂಪನಿಗಳಿಗೆ ‘ವರ್ಕ್ ಫ್ರಮ್‌ ಹೋಮ್‌’ ಪದ್ಧತಿಯನ್ನು ಕಾಯಂಗೊಳಿಸಲು ಹಾದಿ ಸುಗಮವಾಗಲಿದೆ.

” ದೇಶವನ್ನು ತಂತ್ರಜ್ಞಾನದ ಪ್ರಮುಖ ತಾಣವನ್ನಾಗಿ ಪರಿವರ್ತಿಸಲು ಟೆಲಿಕಾಂ ಇಲಾಖೆಯ ‘ಇತರ ಸೇವಾ ಪೂರೈಕೆ (ಒಎಸ್‌ಪಿ)’ ಮಾರ್ಗದರ್ಶಿಯನ್ನು ಸರಳಗೊಳಿಸಲಾಗಿದೆ. ಬಿಪಿಒ ಉದ್ದಿಮೆಯ ಹೊರೆಯನ್ನು ಇದು ಗಣನೀಯವಾಗಿ ತಗ್ಗಿಸಲಿದೆ. ಯಾವುದೇ ಒಎಸ್‌ಪಿ ನಿಬಂಧನೆಗಳ ಅಗತ್ಯವಿಲ್ಲದೆಯೇ ಕಂಪನಿಗಳು ಡೇಟಾ ಸಂಬಂಧಿತ ಯೋಜನೆಗಳಲ್ಲಿಇನ್ನು ಮುಂದೆ ತೊಡಗಿಸಿಕೊಳ್ಳಬಹುದು. ಇತರ ಹಲವು ಅಗತ್ಯಗಳೂ ದೂರವಾಗಲಿದ್ದು, ಉತ್ಪಾದಕತೆ ಹೆಚ್ಚಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್‌ಗಳ ಮೂಲಕ ವಿವರಿಸಿದ್ದಾರೆ.

ವರ್ಕ್ ಫ್ರಂ ಹೋಮ್‌ ಶಾಶ್ವತವಲ್ಲ, ಕೆಲವು ಕಂಪನಿಗಳಿಂದ ನೌಕರರಿಗೆ ಆಹ್ವಾನ

”ಮಾಹಿತಿ ತಂತ್ರಜ್ಞಾನವು ದೇಶದ ಹೆಮ್ಮೆಯ ಕ್ಷೇತ್ರ. ಈ ಸುಧಾರಣೆ ಕ್ರಮದಿಂದ ಪ್ರತಿಭಾವಂತರಿಗೆ ಹೆಚ್ಚಿನ ಉತ್ತೇಜನ ಲಭಿಸಲಿದೆ” ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಐಟಿ, ಬಿಪಿಒ ವಲಯಕ್ಕೆ ಏನು ಲಾಭ?

ಐಟಿ, ಬಿಪಿಒ ಕಂಪನಿಗಳಿಗೆ ಟೆಲಿಕಾಂ ಇಲಾಖೆಯ ಇತರ ಸೇವಾ ಪೂರೈಕೆ (ಒಎಸ್‌ಪಿ) ನೋಂದಣಿಯ ಅಗತ್ಯ ಇಲ್ಲ.
ಟೆಕ್‌ ಕಂಪನಿಗಳಿಗೆ ವರ್ಕ್ ಫ್ರಮ್‌ ಹೋಮ್‌ ಕುರಿತ ನಿಬಂಧನೆಗಳು ಸಡಿಲ
ಐಟಿ ಕಂಪನಿಗಳು ಕಾಯಂ ಆಗಿ ವರ್ಕ್ ಫ್ರಮ್‌ ಹೋಮ್‌ ವ್ಯವಸ್ಥೆಯನ್ನು ಮುಂದುವರಿಸಬಹುದು.
ಡೇಟಾ ಸಂಬಂಧಿತ ಬಿಪಿಒ ಕಂಪನಿಗಳಿಗೆ ಒಎಸ್‌ಪಿ ಬೇಡ.
ಬ್ಯಾಂಕ್‌ ಖಾತರಿಯ ಠೇವಣಿ, ನಿಯಮಿತ ವರದಿಯ ಬದ್ಧತೆ, ನೆಟ್‌ ವರ್ಕ್ ಡಯಾಗ್ರಾಮ್‌ ಪ್ರಕಟಿಸುವ ಅಗತ್ಯ ಇಲ್ಲ.
ವಿಸ್ತೃತ ಮಾರ್ಗದರ್ಶಿ ಪ್ರಕಟ ನಿರೀಕ್ಷೆ

ನಾಸ್ಕಾಮ್‌ ಸ್ವಾಗತ:
ಕೇಂದ್ರ ಸರಕಾರ ಐಟಿ-ಬಿಪಿಎಂ ವಲಯಕ್ಕೆ ಒಎಸ್‌ಪಿ ಮಾರ್ಗದರ್ಶಿಯನ್ನು ಸಡಿಲಗೊಳಿಸಿರುವುದರಿಂದ ಭವಿಷ್ಯದಲ್ಲಿಉದ್ಯಮ ವಲಯಕ್ಕೆ ಭಾರಿ ಪ್ರಯೋಜನ ದೊರೆಯಲಿದೆ ಎಂದು ಐಟಿ ವಲಯದ ಪ್ರಾತಿನಿಧಿಕ ಸಂಸ್ಥೆ ನಾಸ್ಕಾಮ್‌ ಸ್ವಾಗತಿಸಿದೆ.

ಏನಿದು ಒಎಸ್‌ಪಿ?
ದೂರಸಂಪರ್ಕ ಇಲಾಖೆಯ ನಿಯಮಾವಳಿಗಳ ಪ್ರಕಾರ, ಇತರ ಸೇವಾ ಪೂರೈಕೆದಾರರು (ಅದರ್‌ ಸವೀರ್‍ಸ್‌ ಪ್ರೊವೈಡರ್ಸ್) ವಲಯದಲ್ಲಿಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಬರುತ್ತವೆ. ಅಂದರೆ ನೆಟ್‌ವರ್ಕ್ ಆಪರೇಷನ್‌, ಇ-ಕಾಮರ್ಸ್‌, ಟೆಲಿ-ಬ್ಯಾಂಕಿಂಗ್‌, ಟೆಲಿ-ಮಾರ್ಕೆಟಿಂಗ್‌, ಟೆಲಿ-ಮೆಡಿಸಿನ್‌ ಇತ್ಯಾದಿಗಳು.ಕಾಲ್‌ ಸೆಂಟರ್‌, ಬಿಪಿಒ ಇತ್ಯಾದಿಗಳು ಇದೇ ವಲಯದಲ್ಲಿವೆ. ಈ ಸೇವೆಗಳನ್ನು ನೀಡುವ ಉದ್ದಿಮೆಗಳು ದೂರಸಂಪರ್ಕ ಇಲಾಖೆಯಿಂದ ಒಎಸ್‌ಪಿ ನೋಂದಣಿ ಮಾಡಿಕೊಳ್ಳಬೇಕು. ಟೆಲಿಕಾಂ ಸಂಪನ್ಮೂಲ ಬಳಸುವ ಉದ್ದಿಮೆಗಳಿಗೆ ಒಎಸ್‌ಪಿ ನೋಂದಣಿ ಕಡ್ಡಾಯವಾಗಿತ್ತು.

Comments are closed.