ರಾಷ್ಟ್ರೀಯ

ಪುಲ್ವಾಮಾ ದಾಳಿ; ವಿಪಕ್ಷ ಕೀಳು ಮಟ್ಟದ ರಾಜಕೀಯದಲ್ಲಿ ತೊಡಗಿತ್ತು: ಮೋದಿ ಆಕ್ರೋಶ

Pinterest LinkedIn Tumblr

ಕೆವಾಡಿಯಾ(ಗುಜರಾತ್): ಕಳೆದ ವರ್ಷದ ಪುಲ್ವಾಮಾ ಭಯೋತ್ಪಾದಕ ದಾಳಿಯ ಸತ್ಯವನ್ನು ಪಾಕಿಸ್ತಾನ ಸಂಸತ್ತು ಒಪ್ಪಿಕೊಂಡಿದೆ, ನಮ್ಮ 40 ಮಂದಿ ಯೋಧರು ಹುತಾತ್ಮರಾದಾಗ ಇಡೀ ದೇಶ ದುಃಖದಿಂದ ಮರುಗುತ್ತಿದ್ದರೆ ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕೋಸ್ಕರ ಕೀಳು ಮಟ್ಟದ ರಾಜಕೀಯದಲ್ಲಿ ತೊಡಗಿದ್ದರು ಎಂದು ವಿರೋಧ ಪಕ್ಷವನ್ನು ಪ್ರಧಾನಿ ಮೋದಿ ಆಪಾದಿಸಿದ್ದಾರೆ.

ಅವರು ಇಂದು ಬೆಳಗ್ಗೆ ಗುಜರಾತ್ ನ ಕೆವಾಡಿಯಾದಲ್ಲಿ ನರ್ಮದಾ ನದಿ ತೀರದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಏಕತಾ ದಿನದ ಪರೇಡ್ ವೀಕ್ಷಿಸಿ ಮಾತನಾಡಿದರು. ಅದಕ್ಕೂ ಮುನ್ನ ಪಟೇಲ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.

ಪುಲ್ವಾಮಾ ದಾಳಿ ನಂತರ ಕೇಳಿಬಂದ ಅನಪೇಕ್ಷಿತ ಮಾತುಗಳನ್ನು ಈ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯೋಧರ ಬಲಿದಾನದಿಂದ ಆದ ನಷ್ಟದಿಂದ ದೇಶ ಮರುಗುತ್ತಿದ್ದರೆ ಕೆಲವರು ತಮ್ಮ ಸ್ವಾರ್ಥ ಹಿತಕ್ಕೋಸ್ಕರ ಕೀಳುಮಟ್ಟದ ರಾಜಕೀಯ ಮಾಡಿದ್ದರು. ನಮ್ಮ ನೆರೆಯ ದೇಶ ಪಾಕಿಸ್ತಾನದ ಸಂಸತ್ತಿನಲ್ಲಿ ದಾಳಿಯನ್ನು ಒಪ್ಪಿಕೊಂಡಾಗ ಇಂತವರ ನಿಜವಾದ ಮುಖ ಕಳಚಿಬಿದ್ದಿದೆ ಎಂದರು.

ಪುಲ್ವಾಮಾ ದಾಳಿ ನಂತರ ಮಾಡಿದ ರಾಜಕೀಯ ನೋಡಿದರೆ ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಗೊತ್ತಾಯಿತು. ಇಂತಹ ರಾಜಕೀಯ ನಮ್ಮ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವುದರಿಂದ ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತೇನೆ. ದೇಶ ವಿರೋಧಿ ಶಕ್ತಿಗಳ ಕೈಯಲ್ಲಿ ಗೊತ್ತಿಲ್ಲದೆಯೋ, ಗೊತ್ತಿದ್ದೋ ಸಿಕ್ಕಿ ನಲುಗಬಾರದು ಎಂದು ಪ್ರಧಾನಿ ಹೇಳಿದರು.

ಭಯೋತ್ಪಾದನೆ ಅತಿದೊಡ್ಡ ಪಿಡುಗಾಗಿದ್ದು ಇಂದು ವಿಶ್ವದ ಎಲ್ಲಾ ದೇಶಗಳು ಅದರ ವಿರುದ್ಧ ಒಂದಾಗಿ ಹೋರಾಡಬೇಕು. ಭಯೋತ್ಪಾದನೆ, ಹಿಂಸಾಚಾರದಿಂದ ಯಾರಿಗೂ ಲಾಭವಿಲ್ಲ. ಭಾರತ ಯಾವತ್ತಿಗೂ ಅದಕ್ಕೆ ವಿರುದ್ಧವಾಗಿದೆ ಎಂದರು.

ಇಂದು ಕಾಶ್ಮೀರ ಅಭಿವೃದ್ಧಿಯ ಹೊಸ ದಾರಿಯತ್ತ ಸಾಗುತ್ತಿದೆ. ಅದು ಈಶಾನ್ಯ ಭಾಗದಲ್ಲಿ ಶಾಂತಿ ಮರುಸ್ಥಾಪನೆ ವಿಚಾರದಲ್ಲಿಯಾಗಬಹುದು ಅಥವಾ ಅಭಿವೃದ್ಧಿಯ ಕೆಲಸಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಆಗಿರಬಹುದು, ಇಂದು ದೇಶ ಐಕ್ಯತೆಯ ಹೊಸ ಆಯಾಮವನ್ನು ಸ್ಥಾಪಿಸುತ್ತಿದೆ ಎಂದರು.

ಕೋವಿಡ್-19 ಪ್ರಸ್ತಾಪಿಸಿದ ಮೋದಿ: ಕಳೆದ ಏಳು ತಿಂಗಳಿನಿಂದ ಭಾರತ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ತೀವ್ರ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಕೋವಿಡ್ ವಾರಿಯರ್ಸ್ ಗೆ 130 ಕೋಟಿ ಭಾರತೀಯರು ಒಟ್ಟಾಗಿ ಗೌರವ ಸೂಚಿಸಿದ್ದಾರೆ. ಈ ಅಸಹಜ ಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಒಟ್ಟಾಗಿ ನಿಂತು ಶ್ರಮಿಸಿದರೆ ಎಂತಹ ಸಮಸ್ಯೆಯನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಭಾರತೀಯರು ತೋರಿಸಿಕೊಟ್ಟಿದ್ದಾರೆ ಎಂದು ಕೊಂಡಾಡಿದರು.

ಗುಜರಾತ್ ನ ಸಬರ್ಮತಿ ನದಿಯಿಂದ ಕೆವಾಡಿಯಾಗೆ ಸೀಪ್ಲೇನ್ ಸೇವೆ ಆರಂಭವಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Comments are closed.