ರಾಷ್ಟ್ರೀಯ

ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡಿದ್ದ 23 ಮಂದಿ ಪೊಲೀಸರಿಗೆ ಕೊರೋನಾ!

Pinterest LinkedIn Tumblr


ಕೆವಾಡಿಯಾ: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಗೆ ಆಗಮಿಸಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ 23 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ.

ಪ್ರಧಾನಿ ಮೋದಿ ಗುಜರಾತ್ ನಲ್ಲಿ 2 ದಿನಗಳ ಕಾಲ ಉಳಿಯಲಿದ್ದು, ಕೆವಡಿಯಾ ಮತ್ತು ಅಹಮದಾಬಾದ್‌ ನಡುವೆ ‘ಸೀಪ್ಲೇನ್‌‘ ಸೇವೆ ಉದ್ಘಾಟಿಸಲಿದ್ದಾರೆ. ಇದೇ ವೇಳೆ ‘ಸ್ಟ್ಯಾಚ್ಯು ಆಫ್ ಯುನಿಟಿ‘– ವಲಭಭಾಯಿ ಪಟೇಲ್ ಅವರ ಪುತ್ಥಳಿಯ ಸ್ಥಳಕ್ಕೆ ಭೇಟಿ ಕೆಲವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಈ ಎಲ್ಲ ಕಾರ್ಯಕ್ರಮಗಳಿಗಾಗಿ ಗುಜರಾತ್ ಸರ್ಕಾರ ಸುಮಾರು 5 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಿದ್ದು, ಈ ಪೈಕಿ 23 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಪ್ರಧಾನಿ ಮೋದಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಸಿಬ್ಬಂದಿಗಳನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಕತಾ ಪ್ರತಿಮೆ ಇರುವ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದಲ್ಲಿ ಎಸ್ ಆರ್ ಪಿ ಸೇರಿದಂತೆ 5 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಈ ಪೈಕಿ 3,651 ಮಂದಿ ಪೊಲೀಸರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 23 ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಪ್ರಸ್ತುತ ಸೋಂಕಿತ ಪೊಲೀಸರನ್ನು ರಾಜ್ಪಿಪಾಲಾ ಪಟ್ಟಣದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದೇ ಎಕತಾ ಪ್ರತಿಮೆ ಬಳಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ 5 ಮಂದಿ ಪೊಲೀಸರಲ್ಲಿ ಇದೇ ಅಕ್ಟೋಬರ್ 27 ಸೋಂಕು ದೃಢಪಟ್ಟಿತ್ತು.

ಇನ್ನು 2 ದಿನಗಳ ಗುಜರಾತ್ ಪ್ರವಾಸದಲ್ಲಿ ಪ್ರಧಾನಿ ಮೋದಿ ಹಲವು ಸರಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಮುಖವಾಗಿ ರಾಷ್ಟ್ರೀಯ ಏಕತೆ ದಿನಾಚರಣೆಯ(ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ) ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‍ನ ಕೆವಾಡಿಯಾದಲ್ಲಿ ನಡೆಯುವ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 31ರಂದು ಪಟೇಲ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಪಟೇಲ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದು, ಏಕ್ತಾ ಪ್ರತಿಜ್ಞಾ ಮತ್ತು ಏಕ್ತಾ ದಿವಾಸ್ ಪೆರೇಡ್‍ಗೆ ಸಾಕ್ಷಿಯಾಗಲಿದ್ದಾರೆ. ಕೆವಾಡಿಯಾದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಪ್ರಧಾನಿ ಮೋದಿ ನಾಳೆ ಮತ್ತು ಅ.31ರಂದು ವಿವಿಧ ಯೋಜನೆಗಳಿಗೆ ಚಾಲನೆ ನಿಡಲಿದ್ದಾರೆ. ಇವುಗಳಲ್ಲಿ ಏಕ್ತಾ ಕ್ರೂಸ್ ಸೇವೆಯ ಪ್ರತಿಮೆ ಟು ಯೂನಿಟಿ, ಅಲ್ಲಿನ ಏಕ್ತಾ ಮಾಲ್ ಮತ್ತು ಮಕ್ಕಳ ನ್ಯೂಟ್ರಿಷನ್ ಪಾರ್ಕ್ ಉದ್ಘಾಟನೆಯೂ ಸೇರಿವೆ.

ಬಳಿಕ ಪ್ರಧಾನಿ ಮೋದಿ ಯುಎನ್‍ನ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿಯ ವೆಬ್‍ಸೈಟ್ ನ್ನು ಅನಾವರಣಗೊಳಿಸಲಿದ್ದು, ಕೆವಾಡಿಯಾ ಆ್ಯಪ್‍ಅನ್ನು ಯೂನಿಟಿ ಗ್ಲೋ ಗಾರ್ಡನ್‍ನಲ್ಲಿ ಬಿಡುಗಡೆ ಮಾಡಲಿದ್ದಾರೆ. ನಂತರ ಕೆವಾಡಿಯಾದ ವೀಡಿಯೊ ಕಾನ್ಫರೆನ್ಸ್ ಮೂಲಕ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್ಬಿಎಸ್‍ಎನ್‍ಎಎ) ಯಲ್ಲಿ ಭಾರತೀಯ ನಾಗರಿಕ ಸೇವೆಗಳ ಪ್ರೊಬೇಷನರ್‍ಗಳ ಬಗ್ಗೆ ಪ್ರಧಾನಿ ಮಾತನಾಡಲಿದ್ದಾರೆ.

Comments are closed.