ರಾಷ್ಟ್ರೀಯ

ಹತ್ರಾಸ್ ‘ಹತ್ಯಾಚಾರ’ ಪ್ರಕರಣದ ತನಿಖೆ ನಡೆಸುತ್ತಿದ್ದ ಹಿರಿಯ ಎಸ್‌ಐಟಿ ಅಧಿಕಾರಿಯ ಹೆಂಡತಿ ಆತ್ಮಹತ್ಯೆ

Pinterest LinkedIn Tumblr


ಲಖನೌ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಭಾಗವಾಗಿದ್ದ ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಶನಿವಾರ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉನ್ನಾವೊ ಪೊಲೀಸ್ ತರಬೇತಿ ಕೇಂದ್ರದ ಡಿಐಜಿ ಚಂದ್ರ ಪ್ರಕಾಶ್ ಅವರ ಪತ್ನಿ ಪುಷ್ಪಾ ದೇವಿ(36) ಅವರ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಕಾಶ್ ಅವರು ಕಳೆದ ತಿಂಗಳು ಹತ್ರಾಸ್‌ನಲ್ಲಿ ನಡೆದ 19 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರದ ಮತ್ತು ಹತ್ಯೆ ಪ್ರಕರಣದ ತನಿಖೆಗಾಗಿ ಸರ್ಕಾರ ರಚಿಸಿದ ಮೂವರು ಸದಸ್ಯರ ವಿಶೇಷ ತನಿಖಾ ತಂಡದ(ಎಸ್‌ಐಟಿ) ಭಾಗವಾಗಿದ್ದರು.

ಡಿಐಜಿ ಚಂದ್ರ ಪ್ರಕಾಶ್ ಅವರ ಪತ್ನಿ ಪುಷ್ಪಾ ದೇವಿ ಅವರು ಲಖನೌನ ಸುಶಾಂತ್ ಗಾಲ್ಫ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ನವೀನ್ ಅರೋರಾ ತಿಳಿಸಿದ್ದಾರೆ.

ಮನೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

Comments are closed.