ರಾಷ್ಟ್ರೀಯ

ಕೇಂದ್ರದಿಂದ ಇಎಂಐನ 6,500 ಕೋಟಿ ಮೊತ್ತದ ಚಕ್ರಬಡ್ಡಿ ಮನ್ನಾ

Pinterest LinkedIn Tumblr


ನವದೆಹಲಿ: ಸುಪ್ರೀಂ ಕೋರ್ಟ್ ಅಣತಿಯಂತೆ ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯಲ್ಲಿನ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಿದೆ.

ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಆರು ತಿಂಗಳ ಅವಧಿಯಲ್ಲಿನ ಎರಡು ಕೋಟಿ ರೂ ವರೆಗಿನ ಸಾಲಗಳಿಗೆ ಇದು ಅನ್ವಯ ಆಗುತ್ತದೆ. ಹಾಗೆಯೇ, ವಿಶೇಷವೆಂದರೆ ಮೊರಟೋರಿಯಮ್ ಸೌಲಭ್ಯದ ಆಯ್ಕೆ ಮಾಡದ ಸಾಲಗಳಿಗೂ ಇದೂ ಅನ್ವಯ ಆಗುತ್ತದೆ. ಈ ಚಕ್ರಬಡ್ಡಿ ಮನ್ನಾದ ಒಟ್ಟು ಮೊತ್ತ 6,500 ಕೋಟಿ ರೂ ಆಗುತ್ತದೆಂಬ ಲೆಕ್ಕಾಚಾರ ಇದೆ. ಕೊರೋನಾ ವೈರಸ್​ನಿಂದ ಸೃಷ್ಟಿಯಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಈ ಆರು ತಿಂಗಳ ಅವಧಿಯಲ್ಲಿ ಸಾಲಗಳ ಮೇಲಿನ ಬಡ್ಡಿಯನ್ನು ಗ್ರಾಹಕರು ಪಾವತಿ ಮಾಡಬೇಕಾಗುತ್ತದೆ. ಚಕ್ರಬಡ್ಡಿ, ಅಂದರೆ ಬಡ್ಡಿಯ ಮೇಲಿನ ಬಡ್ಡಿ ಮಾತ್ರ ಮನ್ನಾ ಆಗುತ್ತಿದೆ.

ಮೊರಾಟೋರಿಯಮ್ ಅವಧಿಯಲ್ಲಿನ ಬಡ್ಡಿ ವಿಚಾರ ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಕ್ಟೋಬರ್ 14ರಂದು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂದು ಕೇಂದ್ರಕ್ಕೆ ನಿರ್ದೇಶನ ನೀಡಿತು. ಜನರು ಸಂಕಷ್ಟದಲ್ಲಿದ್ದಾರೆ. ಆದಷ್ಟೂ ಬೇಗ ಬಡ್ಡಿ ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿತ್ತು. ಅದರಂತೆ ಕೇಂದ್ರ ಸರ್ಕಾರ ಚಕ್ರಬಡ್ಡಿ ಮನ್ನಾ ಮಾಡಿದೆ.

ಗೃಹ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ಎಂಎಸ್​ಎಂಇ ಸಾಲ, ಗೃಹೋಪಯೋಗಿ ವಸ್ತುಗಳ ಸಾಲ (Consumer Durable Loan), ತುರ್ತು ಅಗತ್ಯ ಸಾಲ (Consumption Loan) ಇವುಗಳನ್ನ ಚಕ್ರಬಡ್ಡಿ ಮನ್ನಾ ಯೋಜನೆಗೆ ಆಯ್ಕೆ ಮಾಡಲಾಗಿದೆ. 2020, ಫೆ. 29ರಂದು ಅಸ್ತಿತ್ವದಲ್ಲಿದ್ದ 2 ಕೋಟಿ ರೂಪಾಯಿ ಮೊತ್ತ ಮೀರದಿರುವ ಈ ಮೇಲಿನ ಸಾಲಗಳಿಗೆ ಇದು ಅನ್ವಯ ಆಗುತ್ತದೆ. ಹಾಗೆಯೇ, ಕೆಟ್ಟ ಸಾಲಗಳಿಗೆ (ಎನ್​ಪಿಎ) ಇದು ಅನ್ವಯ ಆಗುವುದಿಲ್ಲ.

ಮೊರಾಟರೋರಿಯಮ್ ಅವಧಿಯಲ್ಲಿ ನೀವು ಸಾಲಗಳಿಗೆ ಈಗಾಗಲೇ ಚಕ್ರಬಡ್ಡಿ ಕಟ್ಟಿದ್ದರೆ ಆ ಹಣ ನಿಮ್ಮ ಅಕೌಂಟ್​ಗೆ ವಾಪಸ್ ಬರುತ್ತದೆ. ಬ್ಯಾಂಕುಗಳು ಈ ಹಣವನ್ನು ಕೇಂದ್ರದಿಂದ ಪಡೆದುಕೊಳ್ಳುತ್ತವೆ.

Comments are closed.