ನವದೆಹಲಿ: ಅತ್ತೆ-ಮಾವನ ಮನೆಯಿಂದ ಹೊರಹಾಕಲ್ಪಟ್ಟ ಸೊಸೆಯ ಪರವಾಗಿ ಸುಪ್ರೀಂ ಕೋರ್ಟ್ ಆದೇಶವೊಂದನ್ನು ನೀಡಿದೆ.
ಅತ್ತೆ-ಮಾವನ ಅಥವಾ ಪತಿಯ ಜೊತೆ ವಾಸವಿದ್ದ ಸಂಬಂಧಿಕರ ಮನೆಯ ಭಾಗವಾಗಿ ಮಹಿಳೆ ಆ ಮನೆಯಲ್ಲೇ ಉಳಿದುಕೊಳ್ಳಲು ಅರ್ಹಳು. ತಾನು ಇರುವ ಮನೆಯ ಪಾಲುದಾರಿಕೆ ಪಡೆಯುವ ಮೂಲಕ ತನ್ನ ಹಕ್ಕು ಸಾಧಿಸಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆ ಮನೆಯು ಅತ್ತೆ, ಮಾವನ ಅಥವಾ ಪತಿಯ ರಕ್ತ ಸಂಬಂಧಿಕರ ಹೆಸರಿನಲ್ಲಿದ್ದರೂ ಸಹ ಆ ಮನೆಯ ಹಕ್ಕು ಸಾಧಿಸುವ ಅರ್ಹತೆ ಸೊಸೆಗೆ ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಹಲವು ಕೌಟುಂಬಿಕ ಕಲಹ ಕೇಸ್ಗಳನ್ನು ಪರಿಶೀಲಿಸಿ, ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು. ಕೌಟುಂಬಿಕ ಕಲಹಕ್ಕೆ ತುತ್ತಾಗಿರುವ ಮಹಿಳೆಯರ ಪಾಲಿಗೆ ಇದೊಂದು ಬಹುದೊಡ್ಡ ಗೆಲುವು ಎಂದು ಹೇಳಲಾಗಿದೆ.
ಒಂದು ವೇಳೆ ಮಹಿಳೆಯ ಪತಿ ಅವಿಭಕ್ತ ಕುಟುಂಬದಲ್ಲಿ ಇದ್ದು ಅಥವಾ ಪತಿಯ ಸಂಬಂಧಿಕರ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದರೆ ಅಲ್ಲಿಯೂ ಸಹ ತನ್ನ ಹಕ್ಕು ಸಾಧಿಸಲು ಮಹಿಳೆಗೆ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಕೌಟುಂಬಿಕ ಕಾರಣಗಳಿಂದಾಗಿ ಗಂಡನ ಮನೆಯಿಂದ ಹೊರ ಹಾಕಲ್ಪಟ್ಟು, ಮರಳಿ ತನ್ನ ತವರು ಮನೆಗೆ ತೆರಳಲ ಇಚ್ಛೆ ಪಡದ ಮಹಿಳೆಯರ ಪಾಲಿಗೆ ಇದು ಮಹತ್ವದ ಆದೇಶ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.