ರಾಷ್ಟ್ರೀಯ

ಜಾತಿಯ ಕಾರಣಕ್ಕಾಗಿ ಪಂಚಾಯತ್​ ಅಧ್ಯಕ್ಷರನ್ನೇ ನೆಲದ ಮೇಲೆ ಕೂರಿಸಿದ ಸದಸ್ಯರು

Pinterest LinkedIn Tumblr


ಚೆನ್ನೈ: ಪಂಚಾಯತ್​ ಸಭೆಯಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಮಹಿಳಾ ಅಧ್ಯಕ್ಷರನ್ನೇ ಸದಸ್ಯರು ನೆಲದಲ್ಲಿ ಕೂರಿಸಿದ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

ಇಲ್ಲಿನ ಪಂಚಾಯತ್​ ಸಭೆ ವೇಳೆ ಸದಸ್ಯರೆಲ್ಲರೂ ಕುರ್ಚಿ ಮೇಲೆ ಕುಳಿತಿದ್ದರೆ, ಪರಿಶಿಷ್ಠ ಜಾತಿ ಮಹಿಳೆಯೊಬ್ಬರು ಮಾತ್ರ ನೆಲದ ಮೇಲೆ ಕುಳಿತು ಕೊಂಡಿದ್ದಾರೆ. ಈ ಫೋಟೋ ಭಾರೀ ವೈರಲ್​ ಆಗಿದ್ದು, ಈ ನಡೆಗೆ ಟೀಕೆ ವ್ಯಕ್ತವಾಗಿದೆ. ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಕಡಲೂರು ಜಿಲ್ಲಾಧಿಕಾರಿ ಪಂಚಾಯತ್​ ಕಾರ್ಯದರ್ಶಿಯನ್ನು ಅಮಾನತು ಮಾಡಿದ್ದು, ಈ ಕುರಿತು ತನಿಖೆಗೆ ಸೂಚನೆ ನೀಡಿದ್ದಾರೆ. ಕಡಲೂರಿನ ತೆರ್ಕು ತಿಟ್ಟೈ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆಳವರ್ಗಕ್ಕೆ ಸೇರಿದ ಹಿನ್ನಲೆ ಸದಸ್ಯರು ಅವರೊಟ್ಟಿಗೆ ಈ ರೀತಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಆದಿ ದ್ರಾವಿಡ ಎಂಬ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮಹಿಳೆ ಕಳೆದ ವರ್ಷ ಇಲ್ಲಿನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೀಸಲಾತಿ ಆಧಾರದ ಆಯ್ಕೆಯಾದ ಮಹಿಳೆಗೆ ಉಪಾಧ್ಯಕ್ಷ ಈ ರೀತಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಮಹಿಳೆ ನನ್ನ ಜಾತಿ ಆಧಾರದಿಂದ ಉಪಾಧ್ಯಕ್ಷರು ನನಗೆ ಸಭೆಯ ಮುಖ್ಯಸ್ಥತೆಯನ್ನು ವಹಿಸಲು ಬಿಡುವುದಿಲ್ಲ. ಅಲ್ಲದೇ ಯಾವುದೇ ಸಮಾರಂಭದಲ್ಲಿ ಧ್ವಜಾರೋಹಣಕ್ಕೂ ಅವಕಾಶ ನೀಡುವುದಿಲ್ಲ. ನನ್ನ ಬದಲಾಗಿ ಅವರ ತಂದೆಗೆ ಈ ಅವಕಾಶ ನೀಡುತ್ತಿದ್ದಾರೆ. ಮೇಲ್ಜಾತಿಯ ಸದಸ್ಯರು ಹೇಳಿದಂತೆ ನಾನು ಕೇಳುತ್ತಿದ್ದೆ. ಆದರೆ, ಈಗ ಆ ಎಲ್ಲೆ ಮೀರಿದೆ ಎಂದಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಕಡಲೂರು ಜಿಲ್ಲಾಧಿಕಾರಿ ಚಂದ್ರಶೇಖರ್​ ಶಖಾಮುರಿ, ಈ ಘಟನೆ ಕುರಿತು ತನಿಖೆಗೆ ಮುಂದಾಗಲಾಗಿದೆ. ಅಲ್ಲಿನ ಪಂಚಾಯತ್​ನಲ್ಲಿ ನಡೆಯುತ್ತಿರುವ ಈ ಘಟನೆಯನ್ನು ನಮ್ಮ ಗಮನಕ್ಕೆ ತರುವಲ್ಲಿ ಅಲ್ಲಿನ ಗ್ರಾಮ ಪಂಚಾಯತ್​ ಕಾರ್ಯದರ್ಶಿ ವಿಫಲರಾಗಿದ್ದಾರೆ. ಈ ಹಿನ್ನಲೆ ಅವರನ್ನು ಅಮಾನತು ಮಾಡಲಾಗಿದೆ.

ಅಸ್ಪ್ರಶ್ಯತೆ, ಜಾತಿ ತಾರತಮ್ಯ ಆಚರಣೆ ಬಗ್ಗೆ ಕಾನೂನು ಇದ್ದರೂ ಇಲ್ಲಿ ಇನ್ನೂ ಕೂಡ ಆಚರಣೆ ಮಾಡಲಾಗಿದೆ. ಅನೇಕ ಗ್ರಾಮಗಳಲ್ಲಿ ಕೆಳಜಾತಿಯವರಿಗೆ ನಿರ್ಧಿಷ್ಟ ಬೀದಿಯಲ್ಲಿ ವಾಸಿಸುವಂತೆ, ಚಪ್ಪಲಿ ತೊಡದಂತೆ ಶೋಷಣೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಮೇಲ್ವಾರ್ಗದ ರಸ್ತೆಗಳಲ್ಲಿ ಪರಿಶಿಷ್ಠರು ಚಪ್ಪಲಿಯನ್ನು ಕೈಯಲ್ಲಿಡಿದು ಸಾಗಿರುವ ಅನೇಕ ಕ್ಯಾಮೆರಾ ದೃಶ್ಯಗಳು ಕಂಡುಬಂದಿದೆ.

ಮೇಲ್ಜಾತಿಯರವರ ಈ ತಾರತಮ್ಯದಿಂದಾಗಿ ಮಧುರೈ ಜಿಲ್ಲೆಯ ಪಪ್ಪಪಟ್ಟಿ, ಕಿರಿಪಟ್ಟಿ ಮತ್ತು ನತ್ತರ್ಮಂಗಲಂ ಗ್ರಾಮಗಳಲ್ಲಿ ಮೂರು ದಶಕಗಳಿಂದ ಮೀಸಲಾತಿ ಇದ್ದರೂ ಯಾವುದೇ ಸ್ಪರ್ಧಿ ಪಂಚಾಯತ್​ ಚುನಾವಣೆಗೆ ಸ್ಪರ್ಧಿಸಿಲ್ಲ. ಅಷ್ಟು ಮಟ್ಟಿಗೆ ಮೇಲ್ಜಾತಿ ಜನರ ಇಲ್ಲಿ ಪ್ರಭಾವ ಹೊಂದಿದ್ದಾರೆ.

ಧೈರ್ಯ ಮಾಡಿ ಯಾರಾದರೂ ಸ್ಪರ್ಧಿಸಿದ್ದಲ್ಲಿ ಆದರೆ, ಅವರನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಲಾಗುತ್ತಿದೆ. ಅಲ್ಲದೇ ಈ ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಅಲ್ಲದೇ, ಈ ಸಮುದಾಯದವರಿಗೆ ಪ್ರತ್ಯೇಕವಾಗಿ ಅಂತ್ಯ ಸಂಸ್ಕಾರಕ್ಕೆ ಜಾಗ ನಿಗದಿಸಲಾಗಿದೆ.ಮೇಲ್ಜಾತಿಯ ಮತಗಳು ರಾಜಕೀಯ ವೋಟ್​ಬ್ಯಾಂಕ್​ ಆಗಿರುವುದರಿಂದ ದ್ರಾವಿಡ ಪಕ್ಷಗಳು ಈ ದೌರ್ಜನ್ಯವನ್ನು ಹತ್ತಿಕ್ಕುವಲ್ಲಿ ವಿಫಲವಾಗಿದೆ.

Comments are closed.