ರಾಷ್ಟ್ರೀಯ

ಪದ್ಮನಾಭಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು ಸೇರಿ 12 ಸಿಬ್ಬಂದಿಗೆ ಕೊರೊನಾ: ಅ.15ರವರೆಗೂ ಬಾಗಿಲು ಬಂದ್!

Pinterest LinkedIn Tumblr


ತಿರುವನಂತಪುರಂ: ಕೇರಳದ ಪ್ರಸಿದ್ಧ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಇಬ್ಬರು ಪ್ರಧಾನ ಅರ್ಚಕರು ಸೇರಿದಂತೆ ಒಟ್ಟು 12 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅ.15ರವೆರೆಗೆ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ.

ಇಬ್ಬರು ಅರ್ಚಕರು ಸೇರಿದಂತೆ ಒಟ್ಟು 12 ಸಿಬ್ಬಂದಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದ್ದು, ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ಅ.15ರವರೆಗೆ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಆದರೆ ಅರ್ಚಕರು ನಿತ್ಯದ ಪೂಜಾ ವಿಧಿವಿಧಾನಗಳನ್ನು ಎಂದಿನಂತೆ ನೆರವೇರಿಸಲಿದ್ದು, ಅ. 15ರವರೆಗೆ ಭಕ್ತರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ, ರತೀಶನ್, ಇಬ್ಬರು ಪ್ರಧಾನ ಅರ್ಚಕರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ತಂತ್ರಿಗಳು ಪೂಜಾ ಕಾರ್ಯಗಳನ್ನು ನೆರವೇರಿಸಲಿದ್ದಾರೆ ಎಂದು ಹೇಳಿದ್ದಾರೆ.

ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಇಬ್ಬರು ಪ್ರಧಾನ ಅರ್ಚಕರು, 8 ಉಪ ಅರ್ಚಕರು ಹಾಗೂ ಇಬ್ಬರು ಕಾವಲುಗಾರರಿಗೆ ಮಾರಕ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರತೀಶನ್ ಸ್ಪಷ್ಟಪಡಿಸಿದ್ದಾರೆ.

ಲಾಕ್‌ಡೌನ್ ಜಾರಿಯ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ, ಕಳೆದ ಆ.26ರಂದು ಮತ್ತೆ ಭಕ್ತರ ಪ್ರವೇಶಕ್ಕೆ ಬಾಗಿಲು ತೆರೆದಿತ್ತು.

ಇದೀಗ ದೇವಾಲಯದ ಸಿಬ್ಬಂದಿಗೆ ಸೋಂಕು ತಗುಲಿರುವುದರಿಂದ ಅ.15ರವರೆಗೂ ಭಕ್ತರಿಗೆ ಪ್ರವೇಶ ನಿರಾಕರಣೆ ಮಾಡಿ ಆದೇಶ ಹೊರಡಿಸಲಾಗಿದೆ.

Comments are closed.