
ನವದೆಹಲಿ: ನೋಯ್ಡಾ ಮತ್ತು ಮುಂಬೈನ ಕೆಲ ಆರೋಗ್ಯ ಸೇವಕರಲ್ಲಿ ಕೊರೋನಾ ಮರುಸೋಂಕು ಬಂದಿರುವುದು ದೃಢಪಟ್ಟಿದೆ.
ಹಾಂಕಾಂಗ್ನಲ್ಲಿ ಕೊರೋನಾ ಮರುಸೋಂಕು ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಜಗತ್ತಿನ ಹಲವು ಕಡೆ ಮರುಸೋಂಕು ಬಂದಿರುವುದು ತಿಳಿದುಬಂದಿದೆ. ಭಾರತದಲ್ಲೂ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಂದರೆ ಕೊರೋನಾ ಸೋಂಕು ಬಂದು ಗುಣಮುಖಗೊಂಡು ಆರೋಗ್ಯವಂತಾಗಿದ್ದವರಲ್ಲಿ ಮತ್ತೆ ಸೋಂಕು ಕಾಣಿಸಿದೆ. ಇಲ್ಲಿ ಗಮನಾರ್ಹ ವಿಚಾರ ಅಂದರೆ, ಇದು ಮೊದಲೇ ಇದ್ದ ಸೋಂಕು ಮತ್ತೆ ಸಕ್ರಿಯವಾಗಿದ್ದಲ್ಲ. ಹೊಸದಾಗಿ ಮತ್ತೆ ಸೋಂಕು ಕಾಣಿಸಿದೆ. ವೈರಾಣುವಿನ ತಳಿ ರೂಪಾಂತರ (Gene Mutation) ಆಗಿರುವುದು ಸ್ಪಷ್ಟವಾಗಿದೆ. ಇದು ವಿಜ್ಞಾನಿಗಳು ಹಾಗೂ ವೈದ್ಯರ ಕಳವಳಕ್ಕೆ ಕಾರಣವಾಗಿದೆ.
ಮೊದಲು ಬಂದ ಸೋಂಕಿನ ವೇಳೆ ಸಂಗ್ರಹಿಸಲಾಗಿದ್ದ ವೈರಸ್ನ ಆರ್ಎನ್ಎ ಸ್ಯಾಂಪಲ್ ಹಾಗೂ ಮರುಸೋಂಕಿನ ವೇಳೆ ಸಂಗ್ರಹಿಸಲಾದ ಆರ್ಎನ್ಎ ಸ್ಯಾಂಪಲ್ ಅನ್ನು ತಾಳೆ ಮಾಡಿ ನೋಡಿದಾಗ ಎರಡರಲ್ಲೂ ತಳಿ ವ್ಯತ್ಯಾಸಗಳಿರುವುದನ್ನು ದೆಹಲಿಯ ಐಜಿಐಬಿ ಸಂಸ್ಥೆಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಕೊರೋನಾ ವೈರಾಣುವನ್ನು ದೃಷ್ಟಿಯಲ್ಲಿಟ್ಟುಕೊಂಡು ಲಸಿಕೆಗಳನ್ನ ತಯಾರಿಸಲಾಗುತ್ತಿದೆ. ಆದರೆ, ರೂಪಾಂತರಗೊಂಡ ಜೀನ್ ಹೊಂದಿರುವ ವೈರಸ್ ಮೇಲೂ ಅದೇ ಲಸಿಕೆ ಎಷ್ಟು ಪರಿಣಾಮಕಾರಿಯಾಗಬಲ್ಲುದು? ಈ ನಿಟ್ಟಿನಲ್ಲಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ತಳಿ ರೂಪಾಂತರಗೊಂಡ ವೈರಸ್ಗೆ ಲಸಿಕೆ ಪರಿಣಾಮಕಾರಿ ಆಗದೇ ಹೋದಲ್ಲಿ ವಿಶ್ವದ ಎಲ್ಲಾ ಲಸಿಕೆ ಯೋಜನೆಗಳು ನೀರಿನಲ್ಲಿ ಹೋಮ ಮಾಡಿದಂತಾಗುವ ಅಪಾಯ ಇದೆ.
ಆದರೆ, ಐಜಿಐಬಿಯ ನಿರ್ದೇಶಕ ಡಾ. ಅನುರಾಗ್ ಅಗರ್ವಾಲ್, ಇದಕ್ಕೆಲ್ಲ ಆತಂಕಪಡಬೇಕಾಗಿಲ್ಲವೆಂದು ಹೇಳಿದ್ದಾರೆ.
Comments are closed.