ರಾಷ್ಟ್ರೀಯ

ಕೊರೋನಾ ಸಮಯದಲ್ಲಿ 30,000 ಉದ್ಯೋಗ ನೀಡಲು ನಿರ್ಧರಿಸಿದ ಕಂಪನಿ

Pinterest LinkedIn Tumblr


ನವದೆಹಲಿ: ಕರೋನಾ ಸಮಯದಲ್ಲಿ  ಇಕಾಮ್ ಎಕ್ಸ್ಪ್ರೆಸ್ ಕಂಪನಿ ಸುಮಾರು 30 ಸಾವಿರ ಜನರಿಗೆ ಉದ್ಯೋಗ ನೀಡಲು ಯೋಜನೆ ರೂಪಿಸುತ್ತಿದೆ.

ಸರಕುಗಳ ವಿತರಣೆ ಸೇರಿದಂತೆ ಲಾಜಿಸ್ಟಿಕ್ ಸೌಲಭ್ಯಗಳನ್ನು ಒದಗಿಸುವ ಕಂಪನಿಯಾದ ಇಕಾಮ್ ಎಕ್ಸ್‌ಪ್ರೆಸ್ ಮುಂದಿನ ಕೆಲವು ವಾರಗಳಲ್ಲಿ ಜನರನ್ನು ನೇಮಿಸಿಕೊಳ್ಳಲು ಯೋಜನೆ ರೂಪಿಸಿದೆ. ಈ ಉದ್ಯೋಗಗಳು ತಾತ್ಕಾಲಿಕವಾಗಿರುತ್ತವೆ. ಹಬ್ಬಗಳ ಸಮಯದಲ್ಲಿ ಇ-ಕಾಮರ್ಸ್ ಕಂಪನಿಗಳಿಂದ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಹೊಸ ಜನರನ್ನು ನೇಮಿಸಿಕೊಳ್ಳಲು ಕಂಪನಿ ನಿರ್ಧರಿಸಿದೆ.

ಕೊರೊನಾ ಮಹಾಮಾರಿಯ ಬರುವ ಮೊದಲು ಕಂಪನಿಯ ಉದ್ಯೋಗಿಗಳ ಸಂಖ್ಯೆ ಸುಮಾರು 23 ಸಾವಿರರಷ್ಟಿತ್ತು. ಲಾಕ್ ಡೌನ್ ಹಾಗೂ ಅದರ ನಂತರದ ಕಾಲದಲ್ಲಿ ಹೆಚ್ಚಾಗಿರುವ ಆನ್ಲೈನ್ ಆರ್ಡರ್ ಪೂರ್ಣಗೊಳಿಸಲು ಕಳೆದ ಕೆಲ ತಿಂಗಳುಗಳಲ್ಲಿ ಸುಮಾರು 7,500 ಜನರಿಗೆ ಉದ್ಯೋಗ ನೀಡಿದೆ. ಮುಂದುವರೆದ ಕೊರೊನಾ ವೈರಸ್ ಪ್ರಕೋಪದ ನಡುವೆ ಜನರು ಅಗತ್ಯವಸ್ತುಗಳಿಗಾಗಿ, ಔಷಧಿಗಳಿಗಾಗಿ ಹಾಗೂ ಇತರೆ ವಸ್ತುಗಳಿಗಾಗಿ ಇ-ಕಾಮರ್ಸ್ ತಾಣಗಳತ್ತ ಮುಖ ಮಾಡಿದ್ದಾರೆ.

ಈ ಕುರಿತು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಇ-ಕಾಮ್ ಎಕ್ಸ್ಪ್ರೆಸ್ ನ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯ ಮಾನವಸಂಪನ್ಮೂಲ ಅಧಿಕಾರಿ ಸೌರಭ್ ದೀಪ್ ಸಿಂಗಾಲ್, ಕೊರೊನಾ ಮಹಾಮಾರಿ ಇ-ಕಾಮರ್ಸ್ ಉದ್ಯಮವನ್ನು ಒಂದು ವಿಭಿನ್ನ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎಂದಿದ್ದಾರೆ. ಹಬ್ಬಗಳ ಸೀಜನ್ ಇರುವ ಕಾರಣ ಜನರು ವ್ಯಾಪಕ ಮಟ್ಟದಲ್ಲಿ ಖರೀದಿಗಾಗಿ ಮುಗಿಬೀಳುತ್ತಾರೆ. ಜನರಿಂದ ಬರುವ ಈ ಬೇಡಿಕೆಯನ್ನು ಪೂರೈಸಲು ನಾವು ಈಗಾಗಲೇ ನೇಮಕಾತಿ ಆರಂಭಿಸಿದ್ದೇವೆ ಎಂದಿದ್ದಾರೆ. ಈ ಪ್ರಕ್ರಿಯೆ ಅಕ್ಟೋಬರ್ 10ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಸುಮಾರು 30 ಸಾವಿರ ತಾತ್ಕಾಲಿಕ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಎಂದಿದ್ದಾರೆ.

ಆಗಸ್ಟ್‌ನಲ್ಲಿ ಕಂಪನಿಯ ಕಾರ್ಯಪಡೆ 30,500 ರಷ್ಟಿತ್ತು ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ನಾವು ಹಬ್ಬಗಳಿಗೆ ಮೊದಲು 20,000 ಜನರನ್ನು ನೇಮಿಸಿಕೊಂಡಿದ್ದೇವೆ. ಈ ಉದ್ಯೋಗಗಳು ತಾತ್ಕಾಲಿಕವಾಗಿದ್ದರೂ, ಅವುಗಳಲ್ಲಿ ಮೂರನೇ ಒಂದು ಭಾಗವು ಶಾಶ್ವತವಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.