ರಾಷ್ಟ್ರೀಯ

ಕೊರೋನಾತಂಕದ ನಡುವೆಯೇ ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ

Pinterest LinkedIn Tumblr

ಹೊಸದಿಲ್ಲಿ: ಕೊರೋನಾ ಆತಂಕದ ನಡುವೆ ಸೋಮವಾರದಿಂದ ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಕೋವಿಡ್ ಹಿಮ್ಮೆಟ್ಟಿಸಲು ರೂಪಿಸಿದ ನಿಯಮಗಳಂತೆ ಅಧಿವೇಶನದಲ್ಲಿ ಭಾಗಿಯಾಗಲಿರುವ ಸಂಸದರು ಎರಡು ದಿನಗಳ ಮೊದಲು ಕೋವಿಡ್ 19 ಪರೀಕ್ಷೆಗೆ ಒಳಗಾಗಿದ್ದು, ಒಟ್ಟು ಐವರಲ್ಲಿ ಪಾಸಿಟಿವ್‌ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಸೆ. 14ರಿಂದ ಅ. 1ರವರೆಗೆ ಅಧಿವೇಶನ ನಡೆಯಲಿದೆ. ಶನಿವಾರ ಮತ್ತು ಭಾನುವಾರ ರಜೆ ಇರುವುದಿಲ್ಲ. ಮೊದಲ ದಿನವಾದ ಸೋಮವಾರ ಮಾತ್ರ ಲೋಕಸಭೆ, ರಾಜ್ಯಸಭೆಗಳಲ್ಲಿ ಬೆಳಗ್ಗೆಯೇ ಕಲಾಪ ನಡೆಸಲಾಗುತ್ತದೆ. ಅಗಲಿದ ಗಣ್ಯರಿಗೆ ನಮನ ಸಲ್ಲಿಸಿ ಮಂಗಳವಾರಕ್ಕೆ ಕಲಾಪ ಮುಂದೂಡುವ ಸಂಭವವಿದೆ. ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಲಾಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಆಸನ ವ್ಯವಸ್ಥೆಯನ್ನೇ ಬದಲು ಮಾಡಲಾಗಿದೆ. ಕೆಲವರಿಗೆ ತಮ್ಮ ತಮ್ಮ ಕಚೇರಿಗಳಲ್ಲಿ ಮತ್ತು ಮೊಗಸಾಲೆಯಲ್ಲಿ ಕುಳಿತು ಸದನದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ.

ಇದೇ ಮೊದಲ ಬಾರಿಗೆ ಸರ್ವಪಕ್ಷಗಳ ಸಭೆ ನಡೆಸದೇ ಅಧಿವೇಶನ ಆರಂಭಿಸಲಾಗುತ್ತದೆ. ಆದರೆ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಭಾನುವಾರ ಕಲಾಪ ಸಲಹಾ ಸಮಿತಿಯ ಸಭೆ ನಡೆಸಿ, ವಿಪಕ್ಷ ಸದಸ್ಯರ ಬೆಂಬಲ ಕೋರಿದ್ದಾರೆ.

ಚೀನಾ ವಿರುದ್ಧದ ಗಡಿ ಸಂಘರ್ಷ, ಕೊರೋನಾ ನಿರ್ವಹಣೆ, ಆರ್ಥಿಕತೆ ಕುಸಿತ, ಜಿಎಸ್’ಟಿ ನಷ್ಟ ಪರಿಹಾರ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸಜ್ಜಾಗಿವೆ. ಇದಕ್ಕೆ ತಕ್ಕ ತಿರುಗೇಟು ಕೊಡಲು ಆಡಳಿತಾರೂಢ ಬಿಜೆಪಿ ಕೂಡ ಸಜ್ಜಾಗಿದೆ ಎನ್ನಲಾಗುತ್ತಿದೆ.

Comments are closed.