ರಾಷ್ಟ್ರೀಯ

ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್ ವಿಧಿವಶ; ಮೋದಿ ಸಂತಾಪ

Pinterest LinkedIn Tumblr

ಪಾಟ್ನಾ: ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಇಂದು ಇಹಲೋಕ ತ್ಯಜಿಸಿದ್ದಾರೆ. ಕೋವಿಡ್ ಸೋಂಕಿತಗೊಂಡು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಕೇಂದ್ರ ಸರ್ಕಾರದ ಮಾಜಿ ಸಚಿವ ಹಿರಿಯ ಸಮಾಜವಾದಿ ಡಾ.ರಘುವಂಶ ಪ್ರಸಾದ್ ಸಿಂಗ್(74 ವರ್ಷ), ಎದೆನೋವಿನ ಕಾರಣದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ವಾರದ ಹಿಂದೆ ರಘುವಂಶ್ ಪ್ರಸಾದ್ ಅವರು ಕೋವಿಡ್ ಸೋಂಕಿತಗೊಂಡು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಇವತ್ತು ಅವರು ರೋಗಕ್ಕೆ ಬಲಿಯಾಗಿಹೋಗಿದ್ದಾರೆ.

ರಘುವಂಶ್ ಪ್ರಸಾದ್ ಸಿಂಗ್ ಅವರು ಇದೇ ಗುರುವಾರದಂದು ಆರ್​ಜೆಡಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಮೂರು ದಶಕಗಳ ಲಾಲೂ ಸ್ನೇಹಕ್ಕೆ ಅವರು ತಿಲಾಂಜಲಿ ಹಾಡಿದ್ದರು. ಆ ನಂತರ ಶುಕ್ರವಾರ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದು ಜೆಡಿಯು ಸೇರ್ಪಡೆಗೊಳ್ಳುವ ವದಂತಿಗೆ ಎಡೆ ಮಾಡಿಕೊಟ್ಟಿದ್ದರು. ಇಷ್ಟೆಲ್ಲಾ ಕ್ಷಿಪ್ರ ಬೆಳವಣಿಗೆಯ ಜೊತೆಗೆ ಅವರ ಸಾವಿನ ಸುದ್ದಿ ಕೂಡ ಕ್ಷಿಪ್ರವಾಗಿ ಎರಗಿದೆ.

ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯವರಾದ ಡಾ ರಘುವಂಶ್ ಪ್ರಸಾದ್ ಸಿಂಗ್, ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.ಆರ್ ಜೆಡಿಯಲ್ಲಿ ಭಿನ್ನಾಭಿಪ್ರಾಯ ಬಂದು ಇತ್ತೀಚೆಗೆ ಅವರು ಪಕ್ಷ ತೊರೆದಿದ್ದರು.ನಾನು 32 ವರ್ಷ ಲಾಲೂ ಪ್ರಸಾದ್ ಯಾದವ್ ಜೊತೆಗಿದ್ದು, ಆದರೆ ಈಗ ನನ್ನನ್ನು ಕ್ಷಮಿಸಿ, ನಾನು ಬಿಟ್ಟುಹೋಗುತ್ತೇನೆ ಎಂದು ಜೈಲಿನಲ್ಲಿರುವ ಲಾಲೂ ಪ್ರಸಾದ್ ಯಾದವ್ ಗೆ ಪತ್ರ ಬರೆದಿದ್ದರು.

ಐದು ಬಾರಿ ವೈಶಾಲಿ ಕ್ಷೇತ್ರದ ಸಂಸದರಾಗಿದ್ದ ರಘುವಂಶ್ ಪ್ರಸಾದ್ 2014ರ ಚುನಾವಣೆಯಲ್ಲಿ ಮತ್ತು ಕಳೆದ ವರ್ಷದ ಚುನಾವಣೆಯಲ್ಲಿ ಕೂಡ ಸೋತಿದ್ದರು.

ಇತ್ತೀಚೆಗೆ ಮೂರು ಬಾರಿ ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಪತ್ರ ಬರೆದು ವೈಶಾಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವಂತೆ ಮತ್ತು ನರೇಗಾ ಕಾನೂನಿಗೆ ತಿದ್ದುಪಡಿ ವಿಧೇಯಕವನ್ನು ತರುವಂತೆ ಒತ್ತಾಯಿಸಿದ್ದರು. ನೈತಿಕ ರಾಜಕೀಯ ಇತ್ತೀಚಿನ ದಿನಗಳಲ್ಲಿ ಅಧಃಪತನವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರ ನಿಧನವು ಬಿಹಾರ ರಾಜ್ಯದ ರಾಜಕೀಯ ಮತ್ತು ದೇಶದ ರಾಜಕೀಯ ಪರಂಪರೆಗೆ ತುಂಬಲಾರದ ನಷ್ಟ ಎಂದಿದ್ದಾರೆ.

Comments are closed.