ರಾಷ್ಟ್ರೀಯ

ಭಾರತದಲ್ಲಿ ತಯಾರಾಗುತ್ತಿರುವ ಮತ್ತೊಂದು ಕೊರೊನಾ ಲಸಿಕೆ, ಇಲಿಗಳ ಮೇಲಿನ ಪ್ರಯೋಗ ಸಂಪೂರ್ಣ ಯಶಸ್ವಿ

Pinterest LinkedIn Tumblr


ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಸಂಬಂಧಿಗೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ಪಟ್ಟಿಗೆ ಮತ್ತೊಂದು ಲಸಿಕೆ ಸೇರ್ಪಡೆಯಾಗಿದ್ದು, ಇಲಿಗಳ ಮೇಲಿನ ಈ ಲಸಿಕೆಯ ಪ್ರಯೋಗ ಸಂಪೂರ್ಣ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.

ಈ ಲಸಿಕೆಯನ್ನು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿ (ಎನ್‍ಐಐ) ಅಭಿವೃದ್ಧಿಪಡಿಸುತ್ತಿರುವ ಈ ಲಸಿಕೆ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿದ್ದು, ಇಲಿಗಳ ಮೇಲಿನ ಪ್ರಯೋಗ ಸಂಪೂರ್ಣಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಎನ್‍ಐಐ ನಿರ್ದೇಶಕ ಅಮೂಲ್ಯ ಪಾಂಡಾ ಮಾಹಿತಿ ನೀಡಿದ್ದು, ಆರಂಭಿಕವಾಗಿ ಜುಲೈನಲ್ಲಿ ಇಲಿಗಳ ಮೇಲೆ ಈ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ಬಳಿಕ ಉತ್ತಮ ಫಲಿತಾಂಶ ಬಂದಿದ್ದು, ಲಸಿಕೆ ಪಡೆದ ಇಲಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಜೈವಿಕ ತಂತ್ರಜ್ಞಾನ ವಿಭಾಗದ ಅಡಿಯಲ್ಲಿರುವ ಎನ್‍ಐಐ, ಕೊರೊನಾ ವೈರಸ್ ವಿರುದ್ಧ ಪ್ರೊಟೀನ್ ಆಧಾರಿತ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಇದು ಇಲಿಗಳಲ್ಲಿ ವೈರಸ್ ಗಳನ್ನು ತಟಸ್ಥಗೊಳಿಸಿದೆ ಮತ್ತು ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಸಮರ್ಥವಾಗಿದೆ ಎಂದು ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಕೆಲವು ಇಲಿಗಳ ಮೇಲೆ ಮಾತ್ರ ಈ ಪ್ರಯೋಗ ನಡೆದಿತ್ತು. ಆರಂಭಿಕ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಲಿಗಳ ಸಮೂಹದ ಮೇಲೆ ಪ್ರಯೋಗ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಯೋಗ ಯಶಸ್ಸು ಕಂಡಲ್ಲಿ ಮಾನವರ ಮೇಲೆ ಪ್ರಯೋಗ ಮಾಡುವ ಕುರಿತು ಸಂಸ್ಥೆ ನಿರ್ಧರಿಸಿದೆ.

ಇನ್ನು ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಇದು ಭಾರತದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಮೂರನೇ ಲಸಿಕೆಯಾಗಿದೆ. ಇದಕ್ಕೂ ಮೊದಲು ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಮತ್ತು ಝೈಡಸ್ ಕ್ಯಾಡಿಲಾ ಸಂಸ್ಥೆಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಸದ್ಯ ಈ ಎರಡೂ ಲಸಿಕೆಗಳನ್ನು ಮಾನವರ ಮೇಲೆ ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ.

Comments are closed.