ರಾಷ್ಟ್ರೀಯ

ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಚೇತರಿಕೆ, ಕೊರೋನಾ ನೆಗೆಟೀವ್

Pinterest LinkedIn Tumblr


ಚೆನ್ನೈ (ಸೆಪ್ಟೆಂಬರ್‌ 07); ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯ ಹಾಗೂ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಮ್ಮಣ್ಯಂ ಅವರಿಗೆ ಇದೀಗ ಕೊರೋನಾ ವೈರಸ್ ನೆಗೆಟಿವ್ ವರದಿ ಬಂದಿದೆ. ಆದರೆ ಅವರು ಇನ್ನೂ ತೀವ್ರ ಚಿಕಿತ್ಸಾ ಘಟಕದಲ್ಲಿ ವೆಂಟಿಲೇಟರ್ ಸಹಾಯದಲ್ಲೇ ಇರುವುದಾಗಿ ಎಸ್‌ಪಿಬಿ ಪುತ್ರ ಎಸ್.ಪಿ. ಚರಣ್ ಮಾಹಿತಿ ನೀಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಎಸ್‌.ಪಿ. ಚರಣ್, “ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವನ್ನ ಚಿಕ್ಕದಾಗಿ ಆಚರಣೆ ಮಾಡಲಾಗಿದೆ. ತಂದೆ ಶ್ವಾಸಕೋಶದಲ್ಲಿ ಉಂಟಾಗಿದ್ದ ಸೋಂಕು ನಿವಾರಣೆಯಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ” ಎಂದು ತಿಳಿಸಿದ್ದಾರೆ.

ಅಲ್ಲದೆ, “ಎಸ್‌ಪಿಬಿ ಅವರಿಗೆ ಈಗ ಫಿಸಿಯೋಥೆರಪಿ ಮಾಡಲಾಗುತ್ತಿದೆ. ತಮ್ಮ ಐಪ್ಯಾಡ್ ನಲ್ಲಿ ಕ್ರಿಕೆಟ್, ಟೆನಿಸ್ ನೋಡುತ್ತಿದ್ದಾರೆ. ಐಪಿಎಲ್ ಪಂದ್ಯ ಶುರುವಾಗುವುದನ್ನು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ವೆಂಟಿಲೇಟರ್‌ನಿಂದ ಹೊರ ತೆಗೆಯುವ ವಿಶ್ವಾಸವಿದೆ. ಅಭಿಮಾನಿಗಳ ಪ್ರಾರ್ಥನೆಗೆ ಎಂದೆಂದೂ ನಾವು ಋಣಿ” ಎಂದು ಎಸ್.ಪಿ. ಚರಣ್ ತಿಳಿಸಿದ್ದಾರೆ.

ಮೊದಲೇ ಅನಾರೋಗ್ಯದಿಂದ ಬಳಲಿದ್ದ ಎಸ್‌.ಪಿ. ಬಾಲಸುಬ್ರಮಣ್ಯಂ ಆಗಸ್ಟ್‌ 05 ರಂದು ಕೊರೋನಾ ಪರೀಕ್ಷೆಗೆ ಒಳಗಾಗಿ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಕೂಡಲೇ ಅವರನ್ನು ಚೆನ್ನೈನಲ್ಲಿರುವ ಎಂಜಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಗಸ್ಟ್‌ 13ರಂದು ಅವರ ಸ್ಥಿತಿ ಹದಗೆಟ್ಟಿತ್ತು ಪರಿಣಾಮ ತುರ್ತು ಚಿಕಿತ್ಸಾ ಘಟಕಕ್ಕೆ ಅವರನ್ನು ಶಿಫ್ಟ್‌ ಮಾಡಿ ವೆಂಟಿಲೇಟರ್‌ ಮೂಲಕ ಕೃತಕ ಉಸಿರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹೀಗಾಗಿ ಎಸ್‌.ಪಿ. ಬಾಲಸುಬ್ರಣ್ಯಂ ಅವರ ಆರೋಗ್ಯ ಚೇತರಿಕೆ ಕಾಣಲಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಸೂಪರ್‌ ಸ್ಟಾರ್‌ ರಜನಿಕಾಂತ್‌ ಸೇರಿದಂತೆ ಅನೇಕರು ಹಾರೈಸಿದ್ದರು. ಎಲ್ಲರ ಹಾರೈಕೆ ಮತ್ತು ಆಶಯದಂತೆ ಎಸ್‌ಪಿಬಿ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಕೊರೋನಾ ನೆಗೆಟೀವ್ ವರದಿ ಬಂದಿದೆ ಎಂದು ಅವರ ಮಗ ಚರಣ್ ನೀಡಿರುವ ಸಂದೇಶ ಇದೀಗ ಅನೇಕರ ಸಂತೋಷಕ್ಕೆ ಕಾರಣವಾಗಿದೆ.

Comments are closed.