ರಾಷ್ಟ್ರೀಯ

NEET-JEE ಪರೀಕ್ಷೆ ಮುಂದೂಡಲು 6 ರಾಜ್ಯಗಳಿಂದ ಸುಪ್ರೀಂ‌ಗೆ ಅರ್ಜಿ

Pinterest LinkedIn Tumblr


ನವ ದೆಹಲಿ (ಆಗಸ್ಟ್‌ 28); ಕೊರೋನಾ ಸಾಂಕ್ರಾಮಿಕ ರೋಗ ಮತ್ತಷ್ಟು ವ್ಯಾಪಕವಾಗಿ ಹರಡುವ ಭೀತಿ ಇದೆ. ಈ ನಡುವೆ ರಾಷ್ಟ್ರೀಯ ಮಟ್ಟದ NEET ಮತ್ತು JEE ಪರೀಕ್ಷೆಗಳನ್ನು ನಡೆಸದಂತೆ ತಡೆ ನೀಡಬೇಕು ಎಂದು ಒತ್ತಾಯಿಸಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್‌, ಪಂಜಾಬ್, ರಾಜಸ್ಥಾನ ಸೇರಿದಂತೆ ಆರು ರಾಜ್ಯಗಳು ಇಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶ ಪರೀಕ್ಷೆ NEET ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಪರೀಕ್ಷೆ JEE ಯನ್ನು ಮುಂದೂಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಸೇರಿ ಹಲವು ಮಂದಿ ಆಗ್ರಹಿಸುತ್ತಲೇ ಇದ್ದಾರೆ. ಆದರೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಾತ್ರ ಪರೀಕ್ಷೆ ನಡೆಸಿಯೇ ಸಿದ್ದ ಎಂದು ಘಂಟಾಘೋಷವಾಗಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಕಳೆ ವಾರ ವಿರೋಧ ಪಕ್ಷಗಳ ನಾಯಕರ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಅಮರೀಂದರ್‌ ಸಿಂಗ್‌ ಸೇರಿದಂತೆ ಅನೇಕರು ಕೊರೋನಾ ಸಂದರ್ಭದಲ್ಲಿ NEET ಮತ್ತು JEE ಪರೀಕ್ಷೆಗಳನ್ನು ನಡೆಸುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಇದನ್ನು ವಿರೋಧಿಸಿ ಸುಪ್ರೀಂ ಮೊರೆ ಹೋಗುವುದಾಗಿಯೂ ತಿಳಿಸಿದ್ದರು.

ಅದರಂತೆ ಇಂದು ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್‌, ಪಂಜಾಬ್, ರಾಜಸ್ಥಾನ ಸೇರಿದಂತೆ ಆರು ರಾಜ್ಯಗಳು ಕೊರೋನಾ ಕಾಲದ ಅಪಾಯವನ್ನು ಮನಗಂಡು NEET ಮತ್ತು JEE ಪರೀಕ್ಷೆಗಳನ್ನು ನಡೆಸುವ ಕೇಂದ್ರದ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ನಿರ್ದೇಶಿಸಲು ಕೋರಿ ಇಂದು ಸುಪ್ರೀಂ ಕೋರ್ಟ್‌‌ನಲ್ಲಿ ಮನವಿ ಸಲ್ಲಿಸಿವೆ.

ಈ ನಡುವೆ NEET ಮತ್ತು JEE ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಇಂದು ನವ ದೆಹಲಿಯ ಶಾಸ್ತ್ರಿ ಭವನದ ಬಳಿ ಪ್ರತಿಭಟನೆಗೂ ಮುಂದಾಗಿದ್ದಾರೆ. ಈ ವೇಳೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್, “ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಾಗ NEET ಮತ್ತು JEE ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ವಿರೋಧದ ಹೊರತಾಗಿಯೂ ಕೇಂದ್ರ ಸರ್ಕಾರ ಮತ್ತು ಅದರ ಶಿಕ್ಷಣ ಸಚಿವಾಲಯವು 25 ಲಕ್ಷ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಸೆಪ್ಟೆಂಬರ್ 13ಕ್ಕೆ NEET ಪರೀಕ್ಷೆ ಮತ್ತು ಸೆಪ್ಟೆಂಬರ್ 1 ರಿಂದ 6 ರವರೆಗೆ JEE ಪರೀಕ್ಷೆಗಳು ನಡೆಯಲಿವೆ. ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. JEE ಪರೀಕ್ಷಾ ಕೇಂದ್ರಗಳನ್ನು 570 ರಿಂದ 660ಕ್ಕೆ ಏರಿಸಲಾಗಿದೆ. NEET ಪರೀಕ್ಷಾ ಕೇಂದ್ರಗಳನ್ನು 2,546ರಿಂದ 3,843ಕ್ಕೆ ಹೆಚ್ಚಿಸಲಾಗಿದೆ. ಕೊಠಡಿಗಳಲ್ಲಿ 24 ಪರೀಕ್ಷಾರ್ಥಿಗಳ ಬದಲಾಗಿ 12 ಮಂದಿ ಇರಲಿದ್ದಾರೆ ಎಂದು ಈಗಾಗಲೇ NTA ತಿಳಿಸಿದೆ. ಈ ಬಾರಿ ದೇಶಾದ್ಯಂತ 8.58 ಲಕ್ಷ JEE ಅಭ್ಯರ್ಥಿಗಳು ಮತ್ತು 15.97 ಲಕ್ಷ NEET ಪರೀಕ್ಷಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ ಎನ್ನಲಾಗುತ್ತಿದೆ.

Comments are closed.