ರಾಷ್ಟ್ರೀಯ

ದೇಶದಲ್ಲಿ 15 ದಿನದಲ್ಲಿ 10 ಲಕ್ಷ ಹೊಸ ಕೊರೋನಾ ಪ್ರಕರಣಗಳು ಪತ್ತೆ

Pinterest LinkedIn Tumblr


ಹೊಸದಿಲ್ಲಿ: ದೇಶದ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಶನಿವಾರ 30 ಲಕ್ಷ ದಾಟಿದೆ. ಕಳೆದ ಕೇವಲ 15 ದಿನಗಳಲ್ಲಿ ದೇಶದಲ್ಲಿ 10 ಲಕ್ಷ ಹೊಸ ಪ್ರಕರಣಗಳು ವರದಿಯಾಗಿರುವುದು ಆತಂಕ ಹೆಚ್ಚಿಸಿದೆ.

ಆಗಸ್ಟ್‌ 7 ರಂದು ದೇಶದ ಕೋವಿಡ್‌-19 ಪ್ರಕರಣಗಳು ಸಂಖ್ಯೆ 20 ಲಕ್ಷದ ಗಡಿಯನ್ನು ದಾಟಿತ್ತು. ಅಲ್ಲಿಂದ 15 ದಿನದ ಅಂತರದಲ್ಲಿ 10 ಲಕ್ಷ ಹೊಸ ಪ್ರಕರಣಗಳು ದೃಢಪಟ್ಟಿವೆ. ಸದ್ಯ ದಿನನಿತ್ಯ ಅಂದಾಜು 70 ಸಾವಿರ ಪ್ರಕರಣಗಳ ವರದಿಯಾಗುತ್ತಿವೆ.

ಶನಿವಾರದ ರಾತ್ರಿ 9 ಗಂಟೆ ವೇಳೆಗೆ ದೇಶದ ಕೊರೊನಾ ಪ್ರಕರಣಗಳ ಸಂಖ್ಯೆ 30,37,485ಕ್ಕೆ ತಲುಪಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದ್ದು, ಸರಿ ಸುಮಾರು ಅರ್ಧದಷ್ಟು ಪ್ರಕರಣಗಳು ಈ ಮೂರು ರಾಜ್ಯದಿಂದಲೇ ಬರುತ್ತಿವೆ.

ಸದ್ಯ ಅತೀ ಹೆಚ್ಚಿನ ಕೋವಿಡ್‌ ಪ್ರಕರಣಗಳ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದ್ದು ಅಲ್ಲಿ 56 ಲಕ್ಷ ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿ ಬ್ರೆಜಿಲ್‌ ಇದ್ದು, 35 ಲಕ್ಷ ಪ್ರಕರಣಗಳು ಅಲ್ಲಿವೆ. ಭಾರತ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.

ಇನ್ನು ದೇಶದಲ್ಲಿ ಮಹಾರಾಷ್ಟ್ರದಲ್ಲಿ 6,71,942 ಪ್ರಕರಗಳು ದೃಢಪಟ್ಟಿದ್ದರೆ, ತಮಿಳುನಾಡಿನಲ್ಲಿ 3,73,410, ಆಂಧ್ರ ಪ್ರದೇಶದಲ್ಲಿ 3,45,216 ಹಾಗೂ ಕರ್ನಾಟಕದಲ್ಲಿ 2,71,876 ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿವೆ. ಹೊಸ ಸೇರ್ಪಡೆ ತೆಲಂಗಾಣವೂ ಸೇರಿ ದೇಶದ 9 ರಾಜ್ಯಗಳಲ್ಲಿ ಲಕ್ಷಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

Comments are closed.