ರಾಷ್ಟ್ರೀಯ

ಕೇರಳದ ಇಡುಕ್ಕಿ ಭೂ ಕುಸಿತ: ಸಾವಿಗೀಡಾದವರ ಸಂಖ್ಯೆ 52ಕ್ಕೇರಿಕೆ; ಮತ್ತೆ 3 ಮೃತ ದೇಹಗಳು ಪತ್ತೆ

Pinterest LinkedIn Tumblr

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಲದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 52ಕ್ಕೇರಿದೆ. ಮಂಗಳವಾರ ಮತ್ತೆ 3 ಮೃತ ದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಇಡುಕ್ಕಿ ಜಿಲ್ಲಾಡಳಿತ, ಇಂದೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮಣ್ಣಿನಡಿಯಲ್ಲಿ ಸಾಕಷ್ಟು ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಮತ್ತಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆ ಇದೆ. ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಇಲ್ಲಿ ಇನ್ನೂ 19 ಮಂದಿ ನಾಪತ್ತೆಯಾಗಿದ್ದು, ಅವರ ದೇಹಗಳಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದೇವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಜತೆಗೆ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿವೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗಿದೆ ಎಂದು ಹೇಳಿದೆ.

ಭೂ ಕುಸಿತ ಸಂಭವಿಸಿದ ಸ್ಥಳದಿಂದ ಸುಮಾರು 4 ಕಿಮೀ ವರೆಗೂ ಮಣ್ಣಿನ ಪ್ರವಾಹ ಸಾಗಿದ್ದು, ಹೀಗಾಗಿ ಕಾರ್ಯಾಚರಣೆ ಸವಾನಿಂದ ಕೂಡಿದೆ. ಇದರ ನಡುವೆ ಮುತಿರಪುಳ ನದಿ ತುಂಬಿ ಹರಿಯುತ್ತಿದ್ದು, ಇದರ ನಡುವೆ ಮಳೆ ಕಾಟ ಕೂಡ ಕಾರ್ಯಚರಣೆ ನಿಧಾನಗತಿಗೆ ಕಾರಣವಾಗಿದೆ. ನದಿ ನೀರಿನಲ್ಲಿ ನಾಪತ್ತೆಯಾಗಿರುವವ ದೇಹಗಳು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ. ಹೀಗಾಗೀ ಕಾರ್ಯಾಚರಣಾ ವ್ಯಾಪ್ತಿಯನ್ನು ವಿಸ್ತರಿಸಲು ಅಧಿಕಾರಿಗಳು ಚಿಂತನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ 52 ಎನ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಪೊಲೀಸ್, ಅರಣ್ಯ, ಆದಾಯ, ಆರೋಗ್ಯ ಮತ್ತು ಪಂಚಾಯತ್ ಅಧಿಕಾರಿಗಳು ಮತ್ತು ಎನ್‌ಜಿಒ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಸಾಥ್ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Comments are closed.