ರಾಷ್ಟ್ರೀಯ

ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪಲಿರುವ ಚಿನ್ನದ ದರ!

Pinterest LinkedIn Tumblr

ನವದೆಹಲಿ: ಸದ್ಯ ಚಿನ್ನದ ದರ ಪ್ರತಿ 10 ಗ್ರಾಮ್​ಗೆ 57 ಸಾವಿರ ರೂ. ದಾಟಿದೆ. ಈ ಮೊದಲಿನ ಅಂದಾಜಿನ ಪ್ರಕಾರ ಮುಂದಿನ ವರ್ಷದ ಮಾರ್ಚ್​ ವೇಳೆಗೆ ಚಿನ್ನದ ಬೆಲೆ 65,000 ರೂ. ದಾಟುವ ನಿರೀಕ್ಷೆ ಹೊಂದಲಾಗಿತ್ತು. ನಿತ್ಯವೂ ಏರುತ್ತಿರುವ ಬೆಲೆ ಗಮನಿಸಿದರೆ, ದೀಪಾವಳಿ ಹೊತ್ತಿಗೆ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.

ಚಿನ್ನದ ಬೆಲೆಯೀಗ ದಿನವೂ ಹೊಸ ದಾಖಲೆಯನ್ನೇ ಬರೆಯುತ್ತಿದೆ ಎನ್ನುತ್ತಿದ್ದಾರೆ ಮಾರುಕಟ್ಟೆ ಪಂಡಿತರು. ಕಳೆದ 16 ದಿನಗಳಿಂದ ಬಂಗಾರದ ಬೆಲೆ ಏರುಗತಿಯಲ್ಲಿಯೇ ಇದೆ.

ಜೆಪಿ ಮಾರ್ಗನ್​ ಸಂಸ್ಥೆಯ ಮಾರುಕಟ್ಟೆ ವಿಶ್ಲೇಷಣೆ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಚಿನ್ನದ ಬೆಲೆ 70 ಸಾವಿರ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ತಜ್ಞರು ಹೇಳುವ ಪ್ರಕಾರ ಕೋವಿಡ್​19 ಸಂಕಷ್ಟದ ಬಳಿಕವೂ ಆರ್ಥಿಕ ಹಿಂಜರಿತ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಇದ್ದೇ ಇರಲಿದೆ ಹಾಗೂ ಬೆಲೆ ಏರುಗತಿಯಲ್ಲಿಯೇ ಮುಂದುವರಿಯಲಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ಹೀಗಾಗಿ ದೀಪಾವಳಿ ವೇಳೆಗೆ ಚಿನ್ನದ ಬೆಲೆ 70,000 ರೂ.ಗೆ ತಲುಪಿದರೂ ಅಚ್ಚರಿಯಿಲ್ಲ.

ಕಳೆದ ಒಂದು ತಿಂಗಳಿಗೆ ಹೋಲಿಸಿದಲ್ಲಿ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ 7 ಸಾವಿರ ರೂ. ಹೆಚ್ಚಾಗಿದೆ. ಜುಲೈ 9ರಂದು ಪ್ರತಿ 10 ಗ್ರಾ. ಬೆಲೆ 50,600 ರೂ. ಇತ್ತು. ಆಗಸ್ಟ್​ 7ರ ವೇಳೆಗೆ 7 ಸಾವಿರ ರೂ. ಹೆಚ್ಚಾಗಿದೆ.

ಆರ್ಥಿಕ ಹಿಂಜರಿತ ಕಾರಣದಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ. ಆಭರಣ ಹಾಗೂ ಇತರ ಉದ್ದೇಶಗಳಿಗಾಗಿ ಚಿನ್ನದ ಖರೀದಿ ಕುಸಿದಿದೆ. ಆದರೆ, ಕಳೆದೆರಡು ವರ್ಷಗಳಲ್ಲಿ ಚಿನ್ನದ ಮೇಲಿನ ಹೂಡಿಕೆ ಶೇ.50ಕ್ಕೂ ಹೆಚ್ಚು ಆದಾಯ ತಂದು ಕೊಟ್ಟಿದೆ. ಹೀಗಾಗಿ ಚಿನ್ನಕ್ಕೆ ಇನ್ನಿಲ್ಲದ ಬೆಲೆ ಬಂದಿದೆ.

Comments are closed.