ರಾಷ್ಟ್ರೀಯ

ಐರ್ಲೆಂಡ್ ಫೇಸ್ ಬುಕ್ ಸಿಬ್ಬಂದಿ ನೀಡಿದ ಮಾಹಿತಿಯಿಂದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬದುಕಿಸಿದ ದೆಹಲಿ-ಮುಂಬೈ ಪೊಲೀಸ್!

Pinterest LinkedIn Tumblr


ನವದೆಹಲಿ: ಐರ್ಲೆಂಡ್ ಫೇಸ್ ಬುಕ್ ಸಿಬ್ಬಂದಿಯೊಬ್ಬರು ನೀಡಿದ ಮಾಹಿತಿಯನ್ನಾಧರಿಸಿ ದೆಹಲಿ-ಮುಂಬೈ ಪೊಲೀಸರ ಕಾರ್ಯಾಚರಣೆಯಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದ 27 ವರ್ಷದ ವ್ಯಕ್ತಿಯೋರ್ವನ ಜೀವ ಉಳಿದಿದೆ.

ಫೇಸ್ ಬುಕ್ ನಲ್ಲಿ ಈ ವ್ಯಕ್ತಿ ತಾನು ಆತ್ಮಹತ್ಯೆಗೆ ತಯಾರಿ ನಡೆಸುತ್ತಿದ್ದ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಐರ್ಲೆಂಡ್ ಮೂಲದ ಫೇಸ್ ಬುಕ್ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ ತಕ್ಷಣವೇ ಕಾರ್ಯಪ್ರವೃತ್ತರಾದ ಫೇಸ್ ಬುಕ್ ಸಿಬ್ಬಂದಿದೆ ದೆಹಲಿಯ ಸೈಬರ್ ಪೊಲೀಸ್ ವಿಭಾಗದ ಉಪ ಆಯುಕ್ತರಾದ ಅನೇಶ್ ರಾಯ್ ಗೆ ಮಾಹಿತಿ ತಲುಪಿಸಿದ್ದಾರೆ.

ಆ ವ್ಯಕ್ತಿಗೆ ಸಂಬಂಧಿಸಿದ ಆತ್ಮಹತ್ಯಾ ಚಟುವಟಿಕೆಗಳ ಬಗ್ಗೆ ಫೇಸ್ ಬುಕ್ ಸಿಬ್ಬಂದಿ ದೆಹಲಿ ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಆತನನ್ನು ಬದುಕಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಪ್ರಾರಂಭವಾಯಿತು.

ಫೇಸ್ ಬುಕ್ ನಲ್ಲಿದ್ದ ಮಾಹಿತಿಯ ಆಧಾರದಲ್ಲಿ ಸಂಗ್ರಹಿಸಲಾದ ದೂರವಾಣಿ ಸಂಖ್ಯೆ ಈಶಾನ್ಯ ದೆಹಲಿಯ ಓರ್ವ ಮಹಿಳೆಯ ಬಳಿ ಇತ್ತು. ಈಶಾನ್ಯ ವಿಭಾಗದ ಪೊಲೀಸ್ ಉಪ ಆಯುಕ್ತ ಜಸ್ಮೀತ್ ಸಿಂಗ್ ಅವರಿಗೆ ಸುದ್ದಿ ಮುಟ್ಟಿಸಿದರು ರಾಯ್. ಆದರೆ ಆ ದೂರವಾಣಿ ಸಂಖ್ಯೆ ಬಳಕೆ ಮಾಡುತ್ತಿದ್ದ ಮಹಿಳೆ ಕ್ಷೇಮವಾಗಿದ್ದರು. ಆದರೆ ಆಕೆಯ ಮುಂಬೈ ನ ಸಣ್ಣ ಹೊಟೆಲ್ ನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿರುವ ಪತಿ ತನ್ನೊಂದಿಗೆ ಮನಸ್ತಾಪ ಉಂಟಾದ ಕಾರಣ ವಾಪಸ್ ಮುಂಬೈಗೆ ತೆರಳಿದ್ದಾರೆಂದೂ, ಈ ದೂರವಾಣಿ ಸಂಖ್ಯೆಯ ಮೂಲಕ ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆಂದೂ ಪೊಲೀಸರಿಗೆ ಮಾಹಿತಿ ತಿಳಿಸಿದರು. ಅಷ್ಟೇ ಅಲ್ಲದೇ ಆತನ ದೂರವಾಣಿ ಸಂಖ್ಯೆ ಮಾತ್ರ ತಿಳಿದಿದೆಯೆಂದೂ ವಿಳಾಸ ತಿಳಿದಿಲ್ಲವೆಂದೂ ಪೊಲೀಸರಿಗೆ ಹೇಳಿದರು

ತಕ್ಷಣವೇ ಮತ್ತೊಂದು ಸುತ್ತಿನ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮುಂಬೈ ಸೈಬರ್ ವಿಭಾಗದ ಡಿಸಿಪಿ ರಶ್ಮಿ ಕರಂಡೀಕರ್ ಜೊತೆಗೆ ಸಂಪರ್ಕ ಸಾಧಿಸಿ, ಪ್ರಕರಣದ ಬಗ್ಗೆ ಮಾಹಿತಿ ನೀಡಿದರು ಆದರೆ ಈ ವ್ಯಕ್ತಿಯ ದೂರವಾಣಿ ಸಂಖ್ಯೆ ತಲುಪುವಂತಿರಲಿಲ್ಲ.

“ರಾತ್ರಿ 11 ಗಂಟೆಗೆ ಪ್ರಕರಣ ಬಹಿರಂಗವಾಗಿದ್ದು, ಮೂರು ಗಂಟೆಗಳು ಕಳೆದರೂ ಸಹ ವ್ಯಕ್ತಿಯ ಸುಳಿವು ದೊರೆಯಲಿಲ್ಲ” ಆ ವ್ಯಕ್ತಿಯ ವಿಳಾಸ ಕಂಡುಹಿಡಿಯುವುದೇ ಕಷ್ಟವಾಗಿತ್ತು ಎನ್ನುತ್ತಾರೆ ಕರಂಡೀಕರ್

ಕೊನೆಯ ಪ್ರಯತ್ನವಾಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯ ತಾಯಿಯನ್ನು ಸಂಪರ್ಕಿಸಿ ಅವರ ಮೂಲಕ ವಾಟ್ಸ್ ಆಪ್ ವಿಡಿಯೋ ಕರೆ ಮಾಡಿಸಿ ಮನವೊಲಿಸಲು ಪೊಲೀಸರು ಯೋಜನೆ ರೂಪಿಸಿದರು. ಆದರೆ ಕರೆ ಮಾಡುತ್ತಿದ್ದಂತೆಯೇ ಸಂಪರ್ಕ ಕಡಿತಗೊಂಡಿತ್ತು. ತಾಯಿಯ ಕರೆ ಬರುತ್ತಿದ್ದಂತೆಯೇ ಮತ್ತೊಂದು ನಂಬರ್ ನಿಂದ ಕರೆ ಮಾಡಿದ ವ್ಯಕ್ತಿ ತನ್ನ ತಾಯಿಯೊಂದಿಗೆ ಮಾತನಾಡಲು ಪ್ರಾರಂಭಿಸಿದ್ದು ಪೊಲೀಸರಿಗೆ ಆತನ ಲೊಕೇಶನ್ ನ್ನು ಕಂಡುಹಿಡಿಯಲು ಮಹತ್ವದ ಸುಳಿವು ನೀಡಿತ್ತು. ಇದಾದ ಒಂದುಗ ಗಂಟೆಯವರೆಗೂ ಆತನ ಫೋನ್ ನ್ನು ವ್ಯಸ್ತವಾಗಿಡುವಲ್ಲಿ ಯಶಸ್ವಿಯಾದ ಪೊಲೀಸರು ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಮನವೊಲಿಕೆ ಮಾಡಲು ಯತ್ನಿಸಿದರು.

ರಾತ್ರಿ 1.30 ರ ವೇಳೆಗೆ ಆ ವ್ಯಕ್ತಿ ಇದ್ದ ಸ್ಥಳಕ್ಕೇ ತೆರಳಿದ ಪೊಲೀಸರು ಆತನನ್ನು ಆತ್ಮಹತ್ಯೆ ಯೋಚನೆಯಿಂದ ಹೊರತರುವಲ್ಲಿ ಕೊನೆಗೂ ಯಶಸ್ವಿಯಾದರು.

ಲಾಕ್ ಡೌನ್ ನಿಂದಾಗಿ ಕಳೆದ ಕೆಲವು ತಿಂಗಳಿನಿಂದ ಆತನಿಗೆ ಆರ್ಥಿಕ ಹೊರೆ ಉಂಟಾಗಿದ್ದು, ಇದೇ ಕಾರಣದಿಂದಾಗಿ ಪತ್ನಿಯೊಂದಿಗೆ ಮನಸ್ತಾಪ ಉಂಟಾಗಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದಾಗಿ ಆ ವ್ಯಕ್ತಿ ತಿಳಿಸಿದ್ದಾರೆ.

Comments are closed.