ರಾಷ್ಟ್ರೀಯ

ಗ್ರಾಮದ ಮುಖ್ಯಸ್ಥನ ಮಾತು ಕೇಳಿತಾಯಿಯ ಹತ್ಯೆ ಮಾಡಿದ

Pinterest LinkedIn Tumblr


ಮೇರಠ್​: ಗ್ರಾಮದ ಮುಖ್ಯಸ್ಥನ ಮಾತು ಕೇಳಿದ ಪುತ್ರನೊಬ್ಬ ಪಾರ್ಶ್ವವಾಯು ಪೀಡಿತ ತಾಯಿಯನ್ನು ಉಸಿಗಟ್ಟಿಸಿ ಕೊಂದಿದ್ದಾನೆ. ವಿರೋಧಿಗಳು ದಾಳಿ ಮಾಡಿದ್ದರಿಂದಲೇ ಆಕೆ ಸತ್ತಿದ್ದಾಗಿ ಆತ ಆಡಿದ ನಾಟಕ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಈಗ ಆತ ಕಂಬಿಯ ಹಿಂದೆ ಸರಿದಿದ್ದಾನೆ.

ಉತ್ತರ ಪ್ರದೇಶದ ಶರನ್​ಪುರ್​ ಜಿಲ್ಲೆಯ ಘಾನಾ ಖಾಡು ಗ್ರಾಮದ ಜರೀನಾ ಹತಳಾದವಳು. ಈಕೆಯ ಪುತ್ರ ಇಕ್ಬಾಲ್​ ಹತ್ಯೆ ಮಾಡಿದವನು. ಮುಮ್ತಾಜ್​ ಆಹ್ಮದ್​ ಆಕೆಯನ್ನು ಕೊಲ್ಲುವಂತೆ ಸಲಹೆ ನೀಡಿದ ಗ್ರಾಮದ ಮುಖ್ಯಸ್ಥ.

ಗ್ರಾಮದಲ್ಲಿ ಇತ್ತೀಚೆಗೆ ಎರಡು ಗುಂಪುಗಳ ನಡುವೆ ಯಾವುದೋ ವಿಷಯಕ್ಕೆ ಗಲಾಟೆಗಳಾಗಿದ್ದವು. ಪರಸ್ಪರ ಕಲ್ಲು ತೂರಾಟ ಮಾಡಿದ್ದಲ್ಲದೆ, ಹಲ್ಲೆಯನ್ನೂ ಮಾಡಲಾಗಿತ್ತು. ಈ ಘಟನೆಯಲ್ಲಿ ಅಲ್ಪಸ್ವಲ್ಪ ಗಾಯಗೊಂಡಿದ್ದ ಒಂದು ಬಣ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಭೀತಿಗೆ ಒಳಗಾಗಿತ್ತು. ಆದ್ದರಿಂದ ಎದುರಾಳಿ ಗುಂಪನ್ನು ಕಾನೂನಾತ್ಮಕ ಸಿಕ್ಕಿನಲ್ಲಿ ಸಿಲುಕಿಸಲು ನಿರ್ಧರಿಸಿತ್ತು.

ಗ್ರಾಮದಲ್ಲಿರುವ ಯಾರನ್ನಾದರೂ ಕೊಂದರೆ, ಗಲಾಟೆಯ ಸಂದರ್ಭದಲ್ಲಿ ಅವರನ್ನು ಕೊಲೆ ಮಾಡಿದ ಆರೋಪವನ್ನು ಎದುರಾಳಿ ಗುಂಪಿನ ಮೇಲೆ ಹೊರಿಸಬಹುದು ಎಂಬುದು ಈ ಗುಂಪಿನ ನಿರ್ಧಾರವಾಗಿತ್ತು. ಅದಕ್ಕೆ ಪಾರ್ಶ್ವವಾಯು ಪೀಡಿತ 80 ವರ್ಷದ ಜರೀನಾ ಅವರನ್ನು ಸಾಯಿಸುವುದೇ ಸೂಕ್ತ ಎಂದು ಆ ಗುಂಪು ನಿರ್ಧರಿಸಿತ್ತು.

ಅದರಂತೆ ಜರೀನಾ ಅವರ ಪುತ್ರ ಇಕ್ಬಾಲ್​ನನ್ನು ಕರೆದು, ತಾಯಿಯನ್ನು ಕೊಲ್ಲುವಂತೆ ಆತನ ಮನವೊಲಿಸುವಲ್ಲಿ ಗ್ರಾಮದ ಮುಖ್ಯಸ್ಥ ಮುಮ್ತಾಜ್​ ಅಹ್ಮದ್​ ಯಶಸ್ವಿಯಾಗಿದ್ದ. ಮೊದಲೇ ಯೋಜಿಸಿದ್ದಂತೆ ಇಕ್ಬಾಲ್​ ಅನಾರೋಗ್ಯಪೀಡಿತ ತನ್ನ ತಾಯಿಯನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ, ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದ. ಮನೆಗೆ ಮರಳುವಾಗ ಮಾರ್ಗ ಮಧ್ಯೆ ತನ್ನ ಇನ್ನಿಬ್ಬರು ಸಹಚರರೊಂದಿಗೆ ಸೇರಿಕೊಂಡು ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ್ದ.

ಬಳಿಕ ತನ್ನ ಮೇಲೂ ಹಲ್ಲೆಯಾದಂಥ ಸೋಗಿನಲ್ಲಿ ತಾಯಿಯ ಶವದೊಂದಿಗೆ ಆಸ್ಪತ್ರೆಗೆ ಮರಳಿದ್ದ ಆತ, ವಿರೋಧಿ ಗುಂಪಿನವರು ಹಲ್ಲೆ ಮಾಡಿದರು. ಆ ಸಂದರ್ಭದಲ್ಲಿ ನನ್ನ ತಾಯಿಯ ಮೇಲೆ ಕೂಡ ಹಲ್ಲೆ ನಡೆದಿದ್ದು, ಪ್ರಜ್ಞಾಶೂನ್ಯರಾಗಿದ್ದಾರೆ ಎಂದು ಹೇಳಿದ್ದ. ಆದರೆ, ಜರೀನಾಳನ್ನು ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಿ, ಮರಣೋತ್ತರ ಪರೀಕ್ಷೆ ಕೈಗೊಂಡಿದ್ದರು.

ಇತ್ತೀಚೆಗೆ ಬಂದ ಮರಣೋತ್ತರ ಪರೀಕ್ಷೆಯಲ್ಲಿ ಜರೀನಾ ಅವರನ್ನು ಉಸಿರುಗಟ್ಟಿಸಿ ಕೊಂದಿರುವ ಅಂಶ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಇಕ್ಬಾಲ್​ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡ. ಅಲ್ಲದೆ, ಗ್ರಾಮದ ಮುಖ್ಯಸ್ಥರ ಮಾತು ಕೇಳಿ ಈ ಕೃತ್ಯ ಎಸಗಿದ್ದಾಗಿ ಹೇಳಿದ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.