ನವದೆಹಲಿ: ಇಂದು(ಬುಧವಾರ) ಪ್ರಧಾನಿ ಮೋದಿ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಅಮಿತ್ ಶಾ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಗೆ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರಕ್ಕೆ ನಡೆದ
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಆದರೆ ಆಸ್ಪತ್ರೆಯಿಂದಲೇ ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮವನ್ನು ಸಂಭ್ರಮಿಸಿರುವ ಅಮಿತ್ ಶಾ, ಭೂಮಿ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಭಾರತೀಯರ ದಶಕಗಳ ಕಸನಾಗಿದ್ದು, ಈ ಕನಸು ಇಂದು ನನಸಾಗಿದೆ ಎಂದು ಅಮಿತ್ ಶಾ ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಮ ಮಂದಿರಕ್ಕಾಗಿ ನಡೆದ ಹೋರಾಟವನ್ನು ಸ್ಮರಿಸಿರುವ ಅಮಿತ್ ಶಾ, ಅಸಂಖ್ಯಾತ ರಾಮ ಭಕ್ತರ ಅಪಾರ ತ್ಯಾಗ ಬಲಿದಾನಗಳ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭುಮಿ ಪೂಜೆ ಕಾರ್ಯಕ್ರಮದ ಪವಿತ್ರ ದಿನವಾದ ಇಂದು ರಾಮ ಜನ್ಮಭೂಮಿ ಚಳುವಳಿಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರನ್ನು ಭಕ್ತಿಯಿಂದ ಸ್ಮರಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ.

Comments are closed.