
ಹೈದರಾಬಾದ್: ಇತ್ತೀಚೆಗೆ ವಿಶಾಖಪಟ್ಟಣ ಹಡಗುಗಟ್ಟೆಯಲ್ಲಿ ಕ್ರೇನ್ವೊಂದು ಉರುಳಿ ಮೃತಪಟ್ಟಿದ್ದ ಅಳಿಯನ ಸಂಸ್ಕಾರಕ್ಕೆ ಬರುತ್ತಿದ್ದ ಒಂದೇ ಕುಟುಂಬದ ಇಬ್ಬರು ಸೇರಿ ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ.
ನಾಗಮಣಿ (48), ಇವರ ಸೊಸೆ ಲಾವಣ್ಯ (23) ಮತ್ತು ಕಾರುಚಾಲಕ ರೌಟೌ ದ್ವಾರಕ (23) ಮೃತರು. ವಿಶಾಖಪಟ್ಟಣದ ಹಿಂದೂಸ್ತಾನ್ ಹಡಗುಗಟ್ಟೆ ನಿಯಮಿತದಲ್ಲಿ (ಎಚ್ಎಸ್ಎಲ್) ಬೃಹತ್ ಕ್ರೇನ್ ಉರುಳಿದ ಪರಿಣಾಮ ಭಾಸ್ಕರ್ ರಾವ್ (35) ಮೃತಪಟ್ಟಿದ್ದರು. ಇವರು ಖಾಸಗಿ ಕಂಪನಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಉರುಳಿದ ಕ್ರೇನ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ ಖರಗ್ಪುರ್ನಿಂದ ನಾಗಮಣಿ ತಮ್ಮ ಕುಟುಂಬ ವರ್ಗದವರೊಂದಿಗೆ ವಿಶಾಖಪಟ್ಟಣಕ್ಕೆ ಬರುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಕಾರು ಶ್ರೀಕಾಕುಲಂ ಜಿಲ್ಲೆಯ ಕಂಚಿಲಿ ಎಂಬಲ್ಲಿ ನಿಂತಿದ್ದ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ನಾಗಮಣಿ, ಲಾವಣ್ಯ ಮತ್ತು ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗಮಣಿಯ ಅವರ ಇಬ್ಬರು ಪುತ್ರರು, ಒಬ್ಬ ಸೊಸೆ ಕೂಡ ಗಾಯಗೊಂಡಿದ್ದು, ಶ್ರೀಕಾಕುಲಂನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಿದ್ದಾರೆ. ವಿಶಾಖಪಟ್ಟಣದ ಹಿಂದುಸ್ಥಾನ್ ಹಡಗುಟ್ಟೆ ನಿಯಮಿತದಲ್ಲಿ ಶನಿವಾರ ಬೃಹತ್ ಕ್ರೇನ್ ಉರುಳಿ ಒಟ್ಟು 11 ಮಂದಿ ಮೃತಪಟ್ಟಿದ್ದರು.
Comments are closed.