
ನವದೆಹಲಿ (ಆ. 3): ದೆಹಲಿಯ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಶರವಣ ಭವನಕ್ಕೆ ತನ್ನ ಕುಟುಂಬದೊಂದಿಗೆ ಊಟಕ್ಕೆ ಹೋಗಿದ್ದ ವ್ಯಕ್ತಿಗೆ ಶಾಕ್ ಕಾದಿತ್ತು. ದೋಸೆಯ ಜೊತೆಗೆ ಕೊಟ್ಟಿದ್ದ ಸಾಂಬಾರಿನಲ್ಲಿ ಸತ್ತ ಹಲ್ಲಿಯೊಂದು ಬಿದ್ದಿತ್ತು! ಸಾಂಬಾರಿನ ಕಪ್ನಲ್ಲಿ ಸತ್ತ ಹಲ್ಲಿ ಇರುವ ವಿಡಿಯೋವನ್ನು ಆ ವ್ಯಕ್ತಿ ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪಂಕಜ್ ಅಗರ್ವಾಲ್ ಎಂಬ ವ್ಯಕ್ತಿ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ದೆಹಲಿಯಲ್ಲಿರುವ ಸೌತ್ ಇಂಡಿಯನ್ ರೆಸ್ಟೋರೆಂಟ್ ಶರವಣ ಭವನಕ್ಕೆ ಹೋಗಿದ್ದರು. ಆಗ ದೋಸೆ ಆರ್ಡರ್ ಮಾಡಿದ್ದರು. ದೋಸೆಯ ಜೊತೆಗೆ ಚಟ್ನಿ ಮತ್ತು ಸಾಂಬಾರ್ ನೀಡಲಾಗಿತ್ತು. ಅರ್ಧ ದೋಸೆ ತಿಂದಾದ ಬಳಿಕ ಸಾಂಬಾರಿನ ಕಪ್ನಲ್ಲಿ ಸತ್ತ ಹಲ್ಲಿ ಬಿದ್ದಿರುವುದು ಗೊತ್ತಾಗಿದೆ. ಇದನ್ನು ನೋಡಿದ ಪಂಕಜ್ ಮತ್ತು ಅವರ ಕುಟುಂಬದವರಿಗೆ ಶಾಕ್ ಆಗಿದೆ.
ವಿಷಕಾರಿಯಾಗಿರುವ ಹಲ್ಲಿ ಬಿದ್ದಿರುವ ಸಾಂಬಾರನ್ನು ನೀಡಿರುವ ರೆಸ್ಟೋರೆಂಟ್ ಸಿಬ್ಬಂದಿ ವಿರುದ್ಧ ಪಂಕಜ್ ಗಲಾಟೆ ಮಾಡಿದ್ದಾರೆ. ಚಮಚದಲ್ಲಿ ಸಾಂಬಾರಿನಿಂದ ಹಲ್ಲಿಯನ್ನು ಎತ್ತಿ ತೋರಿಸಿದರೂ ಹೋಟೆಲ್ ಸಿಬ್ಬಂದಿ ಏನೂ ಮಾತನಾಡಿಲ್ಲ. ಇದರಿಂದ ಕೋಪಗೊಂಡ ಪಂಕಜ್ ಅಗರ್ವಾಲ್ ಇದರಲ್ಲಿ ಅರ್ಧ ಹಲ್ಲಿ ಮಾತ್ರವೇ ಇದೆ. ಉಳಿದ ಅರ್ಧ ಹಲ್ಲಿ ಎಲ್ಲಿ ಹೋಯಿತು? ಇನ್ನೆಷ್ಟು ಜನಕ್ಕೆ ಹಲ್ಲಿ ಬಿದ್ದಿರುವ ಈ ಸಾಂಬಾರ್ ನೀಡಿದ್ದೀರಿ? ಎಂದು ಗಲಾಟೆ ಮಾಡುತ್ತಿರುವುದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ. ಆ ಕಪ್ನಲ್ಲಿದ್ದ ಹಲ್ಲಿಯನ್ನು ಪಂಕಜ್ ಸೇವಿಸಿದ್ದಾರಾ? ಅಥವಾ ಉಳಿದ ಅರ್ಧ ಹಲ್ಲಿ ಸಾಂಬಾರಿನ ಪಾತ್ರಯಲ್ಲೇ ಉಳಿದಿತ್ತಾ ಎಂಬುದು ಗೊತ್ತಾಗಿಲ್ಲ.
ಪಂಕಜ್ ಅಗರ್ವಾಲ್ ಆ ಹೋಟೆಲ್ನ ಮೆನು, ದೋಸೆ ಹಾಗೂ ಸತ್ತ ಹಲ್ಲಿಯ ಫೋಟೋ, ವಿಡಿಯೋಗಳನ್ನು ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ, ಗ್ರಾಹಕರ ಜೀವವನ್ನೂ ಲೆಕ್ಕಿಸದೆ , ಸ್ವಚ್ಛತೆಯಿಲ್ಲದೆ ಬೇಕಾಬಿಟ್ಟಿ ಊಟ-ತಿಂಡಿ ಸಪ್ಲೈ ಮಾಡುತ್ತಿರುವ ಆರೋಪದಲ್ಲಿ ಶರವಣ ಭವನದ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.