ರಾಷ್ಟ್ರೀಯ

ಅಯೋಧ್ಯೆ ರಾಮಜನ್ಮ ಭೂಮಿಯ ಅರ್ಚಕ ಹಾಗೂ 16 ಭದ್ರತಾ ಸಿಬ್ಬಂದಿಗೆ ಕೊರೋನಾ

Pinterest LinkedIn Tumblr


ನವದೆಹಲಿ(ಜು.30): ಇದೇ ಆಗಸ್ಟ್​ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಅಪರೂಪದ ಮತ್ತು ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ. ಭೂಮಿ ಪೂಜೆಗೆ ಇನ್ನು ಕೆಲವೇ ದಿನಗಳಿರುವಾಗ ಅಯೋಧ್ಯೆಯಲ್ಲಿ ಒಂದು ಆಘಾತಕಾರಿ ಸುದ್ದಿಯೊಂದು ಕೇಳಿಬಂದಿದೆ.

ರಾಮಮಂದಿರ ನಿರ್ಮಾಣ ಕಾರ್ಯದ ಭೂಮಿ ಪೂಜೆಗೂ ಕೊರೋನಾ ಕರಿನೆರಳು ಆವರಿಸಿದೆ. ರಾಮಜನ್ಮ ಭೂಮಿಯ ಅರ್ಚಕರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಎಲ್ಲರ ಮನದಲ್ಲೂ ಆತಂಕ ಮನೆ ಮಾಡಿದೆ. ಅರ್ಚಕರ ಜೊತೆಗೆ 16 ಮಂದಿ ಭದ್ರತಾ ಸಿಬ್ಬಂದಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಪ್ರದೀಪ್ ದಾಸ್ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಅರ್ಚಕ. ಇವರು ಆಚಾರ್ಯ ಸತ್ಯೇಂದ್ರ ದಾಸ್ ಅವರ ಶಿಷ್ಯರಾಗಿದ್ದಾರೆ. ರಾಮ ಜನ್ಮ ಭೂಮಿಗೆ ನಿರಂತರವಾಗಿ ಪೂಜೆ ಸಲ್ಲಿಸುವ ನಾಲ್ವರು ಅರ್ಚಕರಲ್ಲಿ ಪ್ರದೀಪ್ ದಾಸ್​ ಸಹ ಒಬ್ಬರಾಗಿದ್ದಾರೆ.

ಸದ್ಯ, ಕೊರೋನಾ ಸೋಂಕಿತ ಅರ್ಚಕರನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ. ದಾಸ್ ಅವರನ್ನು ಬುಧವಾರ ಸಂದರ್ಶನ ಮಾಡಿದ್ದ ಕೆಲವು ಮಾಧ್ಯಮ ಸಿಬ್ಬಂದಿ ಕೂಡ ಆತಂಕದಲ್ಲಿದ್ದಾರೆ.

ಉತ್ತರ ಪ್ರದೇಶ ಆರೋಗ್ಯ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ಅಯೋಧ್ಯೆಯಲ್ಲಿ ಬುಧವಾರ ಒಟ್ಟು 66 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇಲ್ಲಿಯವರೆಗೆ 605 ಮಂದಿ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು, ಸದ್ಯ 375 ಸಕ್ರಿಯ ಪ್ರಕರಣಗಳಿವೆ. ಒಟ್ಟು 13 ಮಂದಿ ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಆಗಸ್ಟ್​ 5ರಂದು ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸುವ ಹಿನ್ನೆಲೆ, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾತ್ ಹಾಗೂ ದೇಶದ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ಕೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಮರಳು ಹಾಗೂ ಪವಿತ್ರ ಜಲವನ್ನು ರವಾನೆ ಮಾಡಲಾಗಿದೆ.

Comments are closed.