ರಾಷ್ಟ್ರೀಯ

ತಾಯಿಂದಲೇ ಮಗುವಿಗೆ ಗರ್ಭಾವಸ್ಥೆಯಲ್ಲಿ ಸೋಂಕು; ಭಾರತದ ಮೊದಲ ಪ್ರಕರಣ ವರದಿ

Pinterest LinkedIn Tumblr


ಪುಣೆ: ಕರೊನಾ ಸೋಂಕು ಮತ್ತೊಂದು ಆಘಾತಕಾರಿ ಹಂತಕ್ಕೆ ಏರಿಕೆಯಾಗಿದೆ. ಈವರೆಗೆ ಇಂಥದ್ದೊಂದು ಪ್ರಕರಣ ದೇಶದಲ್ಲಿ ಕಂಡು ಬಂದಿರಲೇ ಇಲ್ಲ. ಇದೀಗ ಪುಣೆಯ ಆಸ್ಪತ್ರೆಯೊಂದರಲ್ಲಿ ವರದಿಯಾಗುವ ಮೂಲಕ ತೀವ್ರತರದ ಕಳವಳಕ್ಕೂ ಕಾರಣವಾಗಿದೆ.

ತಾಯಿಂದಲೇ ಮಗುವಿಗೆ ಗರ್ಭಾವಸ್ಥೆಯಲ್ಲಿ ಸೋಂಕು ವ್ಯಾಪಿಸಿದ ಪ್ರಕರಣಗಳು ವರದಿಯಾಗಿರಲಿಲ್ಲ. ತಾಯಿಗೆ ಸೋಂಕಿದ್ದರೂ, ಹುಟ್ಟುವ ಮುನ್ನ ಅದು ಮಗುವಿಗೆ ವ್ಯಾಪಿಸುತ್ತಿರಲಿಲ್ಲ. ಆದರೆ ಈಗ, ಇನ್ನೂ ಹೊರ ಜಗತ್ತಿಗೆ ಕಾಲಿಡದ ಮಗುವಿಗೆ ತಾಯಿ ಗರ್ಭದಿಂದಲೇ ಸೋಂಕು ತಗಲುತ್ತಿದೆ. ಪುಣೆಯ ಸಸೂನ್​ ಸರ್ಕಾರಿ ಆಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದೆ. ತಾಯಿಯಿಂದ ಮಗುವಿಗೆ ಕರುಳ ಬಳ್ಳಿಯ ಮೂಲಕ ಕರೊನಾ ವೈರಸ್​ ಸೋಂಕು ಹರಡಿದೆ. ಇದು ಭಾರತದಲ್ಲಿಯೇ ಮೊದಲ ಪ್ರಕರಣ ಎನ್ನಲಾಗಿದೆ.

ಗರ್ಭಿಣಿ ಸೋಂಕಿಗೆ ಒಳಗಾಗಿದ್ದಲ್ಲಿ, ಗರ್ಭಕೋಶದಿಂದ ಮಗುವಿಗೆ ಪೋಷಕಾಂಶ ಹಾಗೂ ಆಮ್ಲಜನಕ ಪೂರೈಸುವ ಕರುಳ ಬಳ್ಳಿಯ ಮೂಲಕ ಕರೊನಾ ವೈರಸ್​ ಸೋಂಕು ಕೂಡ ರವಾನೆಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸಾಮಾನ್ಯವಾಗಿ ಸೋಂಕಿತರ ಸಂಪರ್ಕಕ್ಕೆ ಬಂದ ಜನರಿಗೆ ಕರೊನಾ ವೈರಸ್​ ಅಂಟಿಕೊಳ್ಳುತ್ತದೆ. ಅಂತೆಯೇ ತಾಯಿ ಸೋಂಕಿಗೆ ಒಳಗಾಗಿದ್ದರೆ, ಮಗುವಿಗೂ ಕೂಡ ಸ್ತನಪಾನದ ಮೂಲಕ ವೈರಸ್​ ಹರಡಬಹುದು. ಶಿಶು ಜನನದ ಕೆಲ ದಿನಗಳ ಬಳಿಕ ಅದರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಸರಳವಾಗಿ ಹೇಳುವುದಾದರೆ ಮಗುವಿಗೆ ಹುಟ್ಟಿನಿಂದಲೇ ಸೋಂಕು ಇರುವುದಿಲ್ಲ. ಜನನದ ಬಳಿಕ ಅದು ಸೋಂಕಿಗೆ ಒಳಗಾಗುತ್ತದೆ. ಆದರೆ, ಗರ್ಭಾಶಯದಿಂದಲೇ ಹರಡುವುದು ಸಂಪೂರ್ಣ ಹೊಸ ವಿದ್ಯಮಾನ ಎನ್ನುತ್ತಾರೆ ಸಸೂನ್​ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಆರತಿ ಕಿಣಿಕರ್​.

ಪುಣೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಹೆರಿಗೆಯಾಗುವ ಒಂದು ವಾರದ ಮುನ್ನ ಕರೊನಾ ಲಕ್ಷಣಗಳು ಕಂಡು ಬಂದಿದ್ದವು. ಆಕೆಗೆ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಅದು ನೆಗೇಟಿವ್​ ಆಗಿತ್ತು. ಮಗು ಹುಟ್ಟಿದ ಬಳಿಕ ಅದರ ಕರುಳಬಳ್ಳಿ, ಮಾಸುಚೀಲ ಹಾಗೂ ಮೂಗಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಫಲಿತಾಂಶ ಪಾಸಿಟಿವ್​ ಆಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಮಗುವನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಲಾಗಿತ್ತು. ಒಂದೆರಡು ದಿನಗಳ ಬಳಿಕ ಮಗುವಿನಲ್ಲಿ ಕರೊನಾದ ಲಕ್ಷಣಗಳು ಕಾಣಿಸಿಕೊಂಡಿವೆ. ಚಿಕಿತ್ಸೆ ನೀಡಿದ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು (ಸೈಟೋಕೈನ್​ ಸ್ಟಾರ್ಮ್​) ಕಂಡು ಬಂತು. ಎರಡು ವಾರಗಳ ಬಳಿಕ ಮಗು ಹಾಗೂ ತಾಯಿಯನ್ನು ಡಿಸ್ಚಾರ್ಜ್​ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿದ ತಂಡವನ್ನು ಆಸ್ಪತ್ರೆಯ ಡೀನ್​ ಡಾ. ಮುರಳೀಧರ್​ ತಾಂಬ್ಡೆ ಅಭಿನಂದಿಸಿದ್ದಾರೆ.

Comments are closed.