ರಾಷ್ಟ್ರೀಯ

ಮೊಘಲ್ ವಂಶಸ್ಥನಿಂದ ರಾಮ ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆ ಕಾಣಿಕೆ!

Pinterest LinkedIn Tumblr


ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳಿಂದ ಮಾತ್ರವಲ್ಲ, ಇತರ ಧರ್ಮಿಯರು ನೀಡುವ ದೇಣಿಯನ್ನೂ ಸ್ವೀಕರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಹೇಳಿರುವ ಬೆನ್ನಲ್ಲೇ ಮೊಘಲ್ ವಂಶಸ್ಥರೊಬ್ಬರು ಅಪರೂಪದ ದೇಣಿಗೆ ನೀಡಲು ಮುಂದಾಗಿದ್ದಾರೆ.

ಮೊಘಲ್ ವಂಶಸ್ಥ ಪ್ರಿನ್ಸ್ ಯಾಕೂಬ್ ಹಬೀದುದ್ದೀನ್ ಟೂಸಿ ಅಯೋಧ್ಯೆಯ ರಾಮ ಮಂದಿರಕ್ಕೆ ಬಂಗಾರದ ಇಟ್ಟಿಗೆಯನ್ನು ಕಾಣಿಕೆಯಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ಒಂದು ಕೆ.ಜಿ. ತೂಕದ ಸ್ವರ್ಣ ಇಟ್ಟಿಗೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡುತ್ತೇನೆ, ಅದನ್ನು ದೇಗುಲ ನಿರ್ಮಾಣದಲ್ಲಿ ಬಳಸಬಹುದು ಎಂದು ಪ್ರಕಟಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಡೆಯಲಿರುವುದು ನಮಗೆಲ್ಲರಿಗೂ ಅತ್ಯಂತ ಸಂತೋಷವಾದ ವಿಷಯ. ನಾನು ಮಾತು ನೀಡಿದಂತೆ ರಾಮ ಮಂದಿರ ನಿರ್ಮಾಣಕ್ಕೆ ಮೊಘಲ್ ವಂಶಸ್ಥರ ಪರವಾಗಿ ಕೆ ಜಿ ಬಂಗಾರದ ಇಟ್ಟಿಗೆ ನೀಡುತ್ತೇನೆ ಎಂದು ಯಾಕುಬ್ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಸಮಯ ಕೂಡಾ ಕೇಳಿದ್ದೇನೆ. ಇನ್ನೂ ಸಮಯ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಮೊಘಲರ ವಾರಸುದಾರನೆಂದು ಹೇಳಿಕೊಳ್ಳುವ ಹಬೀದುದ್ದೀನ್ ಟೂಸಿ ಕಳೆದ ವರ್ಷ ತಮ್ಮನ್ನು ಬಾಬ್ರಿ ಮಸೀದಿಯ ಮಸೀದಿಯ ಕೇರ್ ಟೇಕರ್ ಆಗಿ ನೇಮಿಸಬೇಕೆಂದು ಆಗ್ರಹಿಸಿ ಸುದ್ದಿಯಾಗಿದ್ದರು. ಆಗಸ್ಟ್ 5 ರಂದು ಮಧ್ಯಾಹ್ನ 12.15ಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೊರೊನಾ ಸಾಂಕ್ರಾಮಿಕ ಕಾರಣದಿಂದ ಕೆಲವೇ ಮಂದಿ ಪ್ರಮುಖರನ್ನು ಮಾತ್ರ ಆಹ್ವಾನಿಸಲಾಗುತ್ತಿದೆ.

ಆದರೂ, ಸಮಾರಂಭ ಅತ್ಯಂತ ವೈಭವಯುತವಾಗಿ ನಡೆಸಲು ಉತ್ತರ ಪ್ರದೇಶ ಸರ್ಕಾರ ಸಕಲ ವ್ಯವಸ್ಥೆ ಮಾಡುತ್ತಿದೆ. ಮುಖ್ಯಮಂತ್ರಿ ಅದಿತ್ಯನಾಥ್ ಈಗಾಗಲೇ ಎರಡು ಬಾರಿ ಅಯೋಧ್ಯೆಗೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ, ತಮ್ಮ ಸ್ವಂತ ಹಣವನ್ನು ದೇಣಿಗೆ ನೀಡಿದ್ದಾರೆ.

Comments are closed.