ಮನೋರಂಜನೆ

ಚಿತ್ರಮಂದಿರ ತೆರೆಯಲು ಕೇಂದ್ರ ಗೃಹ ಇಲಾಖೆಗೆ ಶಿಫಾರಸು

Pinterest LinkedIn Tumblr


ನವದೆಹಲಿ: ಲಾಕ್​ಡೌನ್ ಮುಗಿದು ಅನ್​ಲಾಕ್ ಶುರುವಾದರೂ‌ ಚಿತ್ರಮಂದಿರಗಳಲ್ಲಿ‌ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ. ಆದರೆ ಚಿತ್ರಮಂದಿರಗಳ ಮಾಲೀಕರಿಗೆ ಹಾಗೂ ಥಿಯೇಟರಿಗೇ ಹೋಗಿ ಸಿನಿಮಾ ನೋಡಬೇಕೆಂಬ ಚಿತ್ರರಸಿಕರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮುಂದಿನ ತಿಂಗಳಿನಿಂದ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡಬಹುದೆಂದು ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಮಾಡಿದೆ.

ಚಿತ್ರಮಂದಿರಗಳ ಮಾಲೀಕರ ಸಂಘದ ಜೊತೆ ಶುಕ್ರವಾರ ಸಮಾಲೋಚನೆ ನಡೆಸಿದ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ‘ತಮ್ಮ ಇಲಾಖೆ ವತಿಯಿಂದ ಚಿತ್ರಮಂದಿರಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಬಹುದು. ಆಗಸ್ಟ್ ಮೊದಲ ವಾರದಲ್ಲಿ ಆರಂಭಿಸಬೇಕೋ, ಕಡೆಯ ವಾರದಲ್ಲಿ ಶುರು ಮಾಡಬೇಕೋ ಎಂಬುದನ್ನು ನೀವು ನಿರ್ಧರಿಸಿ ಮತ್ತು ಅದಕ್ಕೆ ಪೂರಕವಾದ ಮಾರ್ಗಸೂಚಿ ರಚಿಸಿ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಈಗಾಗಲೇ ಶಿಫಾರಸು ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಬಳ್ಳಾ ಅಂತಿಮವಾದ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಅಲ್ಲದೆ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಚಿತ್ರಮಂದಿರಗಳ ಒಳಗೆ ಒಂದು ಸೀಟನ್ನು ಬಿಟ್ಟು ಇನ್ನೊಂದು ಸೀಟಿನಲ್ಲಿ ಮಾತ್ರ ಪ್ರೇಕ್ಷಕರು ಕೂರಲು ವ್ಯವಸ್ಥೆ ಮಾಡಬೇಕು. ಹಾಗೆಯೇ ಒಂದು ಸಾಲು ಬಿಟ್ಟು ಇನ್ನೊಂದು ಸಾಲಿನಲ್ಲಿ ಮಾತ್ರ ಆಸನದ ವ್ಯವಸ್ಥೆ ಮಾಡಬೇಕು ಎಂದು ಕೂಡ ತಿಳಿಸಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆದರೆ ಚಿತ್ರಮಂದಿರಗಳ ಮಾಲೀಕರು ‘ಒಂದು ಸೀಟನ್ನು ಬಿಟ್ಟು ಇನ್ನೊಂದು ಸೀಟಿನಲ್ಲಿ ಮಾತ್ರ ಪ್ರೇಕ್ಷಕರು ಕೂರಲು ವ್ಯವಸ್ಥೆ ಮಾಡುವ ಹಾಗೂ ಒಂದು ರೋ ಬಿಟ್ಟು ಇನ್ನೊಂದು ರೋನಲ್ಲಿ ಮಾತ್ರ ಆಸನದ ವ್ಯವಸ್ಥೆ ಮಾಡುವ’ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ರೀತಿ ಮಾಡುವುದರಿಂದ ಚಿತ್ರಮಂದಿರದ ಒಟ್ಟು ಸಾಮರ್ಥ್ಯದ ಕಾಲು ಭಾಗ ಮಾತ್ರ ಪ್ರೇಕ್ಷಕರನ್ನು ‌ಕೂರಿಸಲು ಸಾಧ್ಯ. ಇದರಿಂದ ಚಿತ್ರಮಂದಿರದ ಮಾಲೀಕರಿಗೆ ಆರ್ಥಿಕವಾಗಿ ಭಾರಿ ನಷ್ಟ ಉಂಟಾಗಲಿದೆ. ಈ ರೀತಿಯಲ್ಲಿ ಚಿತ್ರಮಂದಿರಗಳನ್ನು ನಡೆಸುವುದಕ್ಕಿಂತ ಚಿತ್ರ ಪ್ರದರ್ಶನಗಳನ್ನು ಸ್ಥಗಿತಗೊಳಿವುದೇ ಉತ್ತಮ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜುಲೈ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಂದು ಸುತ್ತು ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಬಹುದು. ಅದಾದ ಬಳಿಕ ಅನ್​ಲಾಕ್ -3 ರ ಮಾರ್ಗಸೂಚಿ ಪ್ರಕಟಗೊಳ್ಳಬಹುದು. ಆಗ ಚಿತ್ರಮಂದಿರಗಳು ಆರಂಭವಾಗುವ ಮತ್ತು ಯಾವ ರೀತಿಯಲ್ಲಿ ಕಾರ್ಯಾರಂಭ ಮಾಡುತ್ತವೆ ಎಂಬ ಬಗ್ಗೆ ಮಾಹಿತಿ ಸಿಗಬಹುದು.

Comments are closed.