ರಾಷ್ಟ್ರೀಯ

ಈ ರಾಸಾಯನಿಕವಿರುವ ಹ್ಯಾಂಡ್​ ಸ್ಯಾನಿಟೈಸರ್​ ಅಪಾಯಕಾರಿ!

Pinterest LinkedIn Tumblr


ನವದೆಹಲಿ: ಕರೊನಾ ವೈರಸ್​ನಿಂದ ಕಾಪಾಡಿಕೊಳ್ಳಲು ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡಲೇಬೇಕು. ಅದರಲ್ಲೂ ಆಗಾಗ ಕೈಗಳನ್ನು ಸ್ಯಾನಿಟೈಸರ್​ನಿಂದ (ಸೋಂಕು ನಿವಾರಕ) ಶುಚಿಗೊಳಿಸಿಕೊಳ್ಳಬೇಕು ಎಮದು ವೈದ್ಯರೇ ಹೇಳುತ್ತಾರೆ. ಹೀಗಾಗಿ ಎಲ್ಲ ಮನೆಗಳಲ್ಲೂ ಈಗ ಸ್ಯಾನಿಟೈಸರ್​ ಬಳಕೆ ಮಾಡಲಾಗುತ್ತಿದೆ.

ಆದರೆ, ಸೋಂಕು ನಿವಾರಕಗಳು ಸಾಮಾನ್ಯವಾಗಿ ಅಲ್ಕೋಹಾಲ್​ ಆಧಾರಿತವಾಗಿರುತ್ತವೆ. ಹೀಗಾಗಿಯೇ ಧಾರ್ಮಿಕ ಮುಖಂಡರು ದೇಗುಲ, ಧಾರ್ಮಿಕ ಸ್ಥಳಗಳಲ್ಲಿ ಇದರ ಬಳಕೆಗೆ ವಿರೋಧಿಸಿದ್ದು ಬೇರೆ ಮಾತು.

ಈ ಸ್ಯಾನಿಟೈಸರ್​ಗಳ ಬಳಕೆ ಕೂಡ ಅಪಾಯಕಾರಿಯಾಗಬಲ್ಲುದು ಎಂಬ ವಿಷಯವೀಗ ಕೊಂಚ ಆತಂಕಕ್ಕೆ ಕಾರಣವಾಗಿದೆ. ಅಮೆರಿಕ ಫುಡ್​ ಆ್ಯಂಡ್​ ಡ್ರಗ್​ ಆ್ಯಡ್ಮಿನಿಸ್ಟ್ರೇಷನ್​ (ಎಫ್​ಡಿಎ) ವಿಭಾಗ ಇಂಥದ್ದೊಂದು ಎಚ್ಚರಿಕೆಯನ್ನು ನೀಡಿದೆ. ಜತೆಗೆ, ಯಾವುದನ್ನು ಬಳಸಬಾರದು ಎಂಬುದಕ್ಕೆ 75 ಉತ್ಪನ್ನಗಳ ವಿವರವನ್ನು ನೀಡಿದೆ.

ಎಫ್​ಡಿಎ ಪ್ರಕಾರ ಸ್ಯಾನಿಟೈಸರ್​ಗಳಲ್ಲಿ ಮೆಥನಾಲ್​ ಇರಕೂಡದು. ಇದು ಚರ್ಮದ ಮೂಲಕ ದೇಹ ಸೇರಿದರೆ ವಿಷಕಾರಿಯಾಗಬಲ್ಲುದು. ನೇರವಾಗಿ ದೇಹಕ್ಕೆ ಸೇರಿದರೆ ಮಾರಣಾಂತಿಕವಾಗಿ ಪರಿಣಮಿಸಬಲ್ಲುದು ಎಂದು ಎಚ್ಚರಿಕೆ ನೀಡಿದೆ. ಮೆಥನಾಲ್​ಅನ್ನು ವುಡ್​ ಅಲ್ಕೋಹಾಲ್​ ಎಂದೇ ಕರೆಯಲಾಗುತ್ತದೆ.

ಮೆಥನಾಲ್​ ದೇಹಕ್ಕೆ ಸೇರಿದರೆ ಗಂಭೀರ ಅನಾರೋಗ್ಯ, ಅಂಧತ್ವ ಹಾಗೂ ಸಾವು ಸಂಭವಿಸಿದ್ದನ್ನು ಎಫ್​ಡಿಎ ಉಲ್ಲೇಖಿಸಿದೆ. ಕೆಲ ಉತ್ಪನ್ನಗಳ ಮಾರಾಟಕ್ಕೆ ಎಫ್​ಡಿಎ ನಿರ್ಬಂಧ ವಿಧಿಸಿದೆ. ಮಾರಾಟವನ್ನು ಹಿಂಪಡೆಯುವಂತೆಯೂ ಸೂಚಿಸಿದೆ. ಈ ಉತ್ಪನ್ನಗಳನ್ನು ಮೆಕ್ಸಿಕೋದಲ್ಲಿ ತಯಾರಿಸಿದ್ದು ಎನ್ನಲಾಗಿದೆ.

ಮೆಥನಾಲ್​ ಅಂಶವಿರುವ ಸ್ಯಾನಿಟೈಸರ್​ಗಳು ಬಳಕೆಗೆ ಅರ್ಹವಲ್ಲ. ಇದು ವಿಷಕಾರಿ ಗುಣಗಳನ್ನು ಹೊಂದಿದೆ. ಇಂಥ ಸ್ಯಾನಿಟೈಸರ್​ಗಳನ್ನು ಬಳಸಿದ್ದರೆ, ಮೆಥನಾಲ್​ ಅಂಶ ದೇಹ ಸೇರುವುದನ್ನು ನಿವಾರಿಸಿಕೊಳ್ಳಲು ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದೂ ಹೇಳಿದೆ.

Comments are closed.