ರಾಷ್ಟ್ರೀಯ

ದಿಢೀರ್ ಕಾಣೆಯಾದ ಸಚಿನ್ ಪೈಲಟ್‌ ಬಣದ 18 ಶಾಸಕರು

Pinterest LinkedIn Tumblr


ಜೈಪುರ (ಜುಲೈ 19); ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸಮತ ಯಾಚನೆಗೆ ಅವಕಾಶ ಕೋರಿದ್ದಾರೆ. ಆದರೆ, ಇದರ ಬೆನ್ನಿಗೆ 18 ಜನ ಸಚಿನ್ ಪೈಲಟ್ ಬಣದ ಕಾಂಗ್ರೆಸ್ ಶಾಸಕರು ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಬಿಜೆಪಿ ಆಡಳಿತವಿರುವ ಕರ್ನಾಟಕಕ್ಕೆ ಇವರನ್ನು ರವಾನಿಸಿರಬಹುದೇ? ಎಂಬ ಸಂದೇಹ ಇದೀಗ ಮನೆ ಮಾಡಿದೆ. ಅಲ್ಲದೆ, ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಎರಡನೇ ಸುತ್ತಿನ ಚಟುವಟಿಕೆಗಳು ಆರಂಭವಾಗಿವೆಯೇ? ಎಂಬ ಅನುಮಾನಗಳೂ ಬಲಗೊಳ್ಳುತ್ತಿವೆ.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇತ್ತೀಚೆಗೆ ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು. ಇದರ ಬೆನ್ನಿಗೆ ಸಚಿನ್ ಪೈಲಟ್ ತಾವು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಗ್ಯೂ ಅವರನ್ನು ಶಾಸಕ ಸ್ಥಾನದಿಂದ ಏಕೆ ವಜಾ ಮಾಡಬಾರದು ಎಂದು ಸ್ಪೀಕರ್ ನೋಟಿಸ್ ನೀಡಿದ್ದರು. ಇದು ಸಾಮಾನ್ಯವಾಗಿ ಅವರನ್ನು ಕೆರಳಿಸಿತ್ತು.

ಇದಲ್ಲದೆ, ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಬಿಜೆಪಿ ನಾಯಕ ಗಜೇಂದ್ರ ಶೇಖಾವತ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದ್ದು, ಇಬ್ಬರನ್ನೂ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ಬೆಳವಣಿಗೆಯಿಂದಲೂ ಸಚಿನ್ ಪೈಲಟ್ ಬಣ ಕೆರಳಿದೆ, ಪರಿಣಾಮ 18 ಶಾಸಕರ ಬಹುಮತ ಯಾಚನೆಗೂ ಮುನ್ನ ದಿಢೀರ್ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಶಾಸಕರು ಬಿಜೆಪಿ ಆಡಳಿತವಿರುವ ಕರ್ನಾಟಕಕ್ಕೆ ಪ್ರಯಾಣಿಸಿದ್ದಾರೆ ಎಂದು ಅನುಮಾನಿಸಲಾಗಿತ್ತು. ಆದರೆ, ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೈಲಟ್ ಬಣದ ಹಿರಿಯ ಶಾಸಕರೊಬ್ಬರು, “ಬಂಡಾಯ ಶಾಸಕರು ಬಿಜೆಪಿ ಅಧಿಕಾರವಿರುವ ಕರ್ನಾಟಕಕ್ಕೆ ಪ್ರಯಾಣಿಸಿಲ್ಲ. ಬದಲಾಗಿ ಹರಿಯಾಣ ಅಥವಾ ದೆಹಲಿಯಲ್ಲೇ ಇದ್ದಾರೆ” ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕಳೆದ ಶನಿವಾರ ಸಚಿನ್ ಪೈಲಟ್ ತನ್ನ ಬೆಂಬಲಿತ ಶಾಸಕರ ಜೊತೆಗೆ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಲು ದೆಹಲಿಗೆ ಕ್ರಮಿಸಿದ್ದರು ಈ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಸಚಿನ್ ಪೈಲಟ್ ಬಣ ಎರಡನೇ ಸುತ್ತಿನ ಚಟುವಟಿಕೆಯನ್ನು ಆರಂಭಿಸಿದೆಯೇ? ಎಂಬ ಅನುಮಾನ ಮೂಡುತ್ತಿದೆ.

ಅಲ್ಲದೆ, ಈ ಹಿಂದೆ ಮಧ್ಯಪ್ರದೇಶದಲ್ಲಿ ಯುವ ನಾಯಕ ಜ್ಯೋತೀರಾದಿತ್ಯ ಸಿಂಧಿಯಾ ಪಕ್ಷದಿಂದ ಹೊರ ನಡೆದಂತೆಯೇ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಸಹ ಕಾಂಗ್ರೆಸ್‌ ಪಕ್ಷದಿಂದ ಹೊರ ನಡೆಯುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗುತ್ತಿದೆ ಎಂದು ರಾಜಕೀಯ ತಜ್ಞರು ಈ ಎರಡೂ ಘಟನೆಯನ್ನು ಹೋಲಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Comments are closed.