ರಾಷ್ಟ್ರೀಯ

ತಿರುಮಲ ತಿರುಪತಿ ದೇವಸ್ಥಾನದ 15 ಅರ್ಚಕರು, 91 ಸಿಬ್ಬಂದಿಗೆ ಕೊರೋನಾ

Pinterest LinkedIn Tumblr


ತಿರುಮಲ (ಜು. 16): ಭಾರತದ ಅತಿ ಶ್ರೀಮಂತ ದೇವಾಲಯ ಎಂದೇ ಖ್ಯಾತಿ ಪಡೆದಿರುವ ತಿರುಮಲ ತಿರುಪತಿ ದೇವಸ್ಥಾನದ 15 ಅರ್ಚಕರಿಗೆ ಕೊರೋನಾ ಸೋಂಕು ತಗುಲಿದೆ. ಕೊರೋನಾ ಲಾಕ್​ಡೌನ್​ನಿಂದಾಗಿ ಮಾರ್ಚ್​ ಅಂತ್ಯದಿಂದ ಮುಚ್ಚಲ್ಪಟ್ಟಿದ್ದ ತಿರುಪತಿ ದೇವಸ್ಥಾನದಲ್ಲಿ ಕಳೆದ ತಿಂಗಳಿನಲ್ಲಿ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಕಡೆಯೂ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ತಿರುಪತಿಯ ಎಲ್ಲ ಅರ್ಚಕರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿತ್ತು.

ಆ ವೈದ್ಯಕೀಯ ಪರೀಕ್ಷೆಯ ಫಲಿತಾಂಶ ಕೈಸೇರಿದ್ದು, ಸದ್ಯದ ಮಟ್ಟಿಗೆ 50 ಅರ್ಚಕರಲ್ಲಿ 15 ಅರ್ಚಕರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ 25 ಅರ್ಚಕರ ವೈದ್ಯಕೀಯ ಪರೀಕ್ಷೆಯ ವರದಿ ಕೈಸೇರಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದ ಆಡಳಿತ ಸಮಿತಿ ತುರ್ತು ಸಭೆ ನಡೆಸುತ್ತಿದೆ. ಇದುವರೆಗೂ ತಿರುಪತಿಯ ಸುಮಾರು 91 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಹೊಸದಾಗಿ 15 ಅರ್ಚಕರಿಗೂ ಸೋಂಕು ದೃಢಪಟ್ಟಿದೆ.

ಜುಲೈ 10ರವರೆಗೆ ತಿರುಪತಿ ದೇವಸ್ಥಾನದಲ್ಲಿ 1,865 ಸಿಬ್ಬಂದಿಗೆ ಕೊರೋನಾ ತಪಾಸಣೆ ನಡೆಸಲಾಗಿದೆ. ಅಲ್ಲದೆ, ಇಲ್ಲಿಗೆ ಬಂದಿದ್ದ 300ಕ್ಕೂ ಹೆಚ್ಚು ಭಕ್ತರಿಗೂ ಕೊರೋನಾ ತಗುಲಿತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದ ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಘ್ವಾಲ್, ಟಿಟಿಡಿಯ 91 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಆದರೆ, ಇದುವರೆಗೂ ಯಾವ ಭಕ್ತರೂ ಕೊರೋನಾದಿಂದ ಸಾವನ್ನಪ್ಪಿರುವ ವರದಿಯಾಗಿಲ್ಲ. ಇಲ್ಲಿಗೆ ಬಂದಿರುವ ಎಲ್ಲ ಭಕ್ತರಿಗೂ ಫೋನ್ ಮಾಡಿ ವಿಚಾರಿಸಲಾಗುತ್ತಿದೆ. ಅದರಲ್ಲಿ ಕೆಲವರಿಗೆ ಸೋಂಕು ತಗುಲಿದ್ದರೂ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ಮಾಹಿತಿ ನೀಡಿದ್ದರು.

ಇದುವರೆಗೂ 2,600ಕ್ಕೂ ಹೆಚ್ಚು ಭಕ್ತರಿಗೆ ಫೋನ್ ಮಾಡಿ ವಿಚಾರಿಸಲಾಗಿದೆ. ಯಾವುದೇ ಭಕ್ತರಿಗೆ ಆರೋಗ್ಯ ಸಮಸ್ಯೆ ಇದ್ದಲ್ಲಿ ದೇವಾಲಯಕ್ಕೆ ಭೇಟಿ ನೀಡಬೇಡಿ. ಒಂದುವೇಳೆ ಇಲ್ಲಿಂದ ಹೋದ ಬಳಿಕ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಟಿಟಿಡಿ ಆಡಳಿತ ಮಂಡಳಿ ಮನವಿ ಮಾಡಿದೆ. ಲಾಕ್​ಡೌನ್​ನಿಂದಾಗಿ 80 ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ತಿರುಮಲ ತಿರುಪತಿ ದೇವಸ್ಥಾನ ಜೂನ್ 11ರಿಂದ ಮತ್ತೆ ತೆರೆಯಲ್ಪಟ್ಟಿತ್ತು.

Comments are closed.