ರಾಷ್ಟ್ರೀಯ

ದೇಶದಲ್ಲಿ ಆಗಸ್ಟ್​ನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸಾಧ್ಯತೆ

Pinterest LinkedIn Tumblr

ನವದೆಹಲಿ (ಜು. 11): ಮಾರ್ಚ್​ 24ರಂದು ಕೇಂದ್ರ ಸರ್ಕಾರ ರಾತ್ರೋರಾತ್ರಿ ಲಾಕ್​ಡೌನ್ ಘೋಷಣೆ ಮಾಡಿದ್ದರಿಂದ ಬೇರೆ ದೇಶಗಳಲ್ಲಿರುವ ಭಾರತೀಯರು ಆಯಾ ದೇಶಗಳಲ್ಲೇ ಸಿಲುಕಿಕೊಳ್ಳುವಂತಾಗಿತ್ತು. ನಂತರ ವಂದೇ ಭಾರತ್ ಮಿಷನ್​ನಡಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಾಸ್ ಕರೆತರುವ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿತ್ತು. ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಭಾರತೀಯರು ವಂದೇ ಭಾರತ್​ ಮಿಷನ್​ನಡಿ ಊರು ಸೇರಿಕೊಂಡಿದ್ದಾರೆ. ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಆಗಸ್ಟ್​ ತಿಂಗಳಿನಿಂದ ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸೋಂಕಿತ ದೇಶಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತ ಈಗ ಮೂರನೇ ಸ್ಥಾನಕ್ಕೆ ಏರಿಕೆಯಾಗಿದೆ. ಹೀಗಾಗಿ, ಜುಲೈ 31ರವರೆಗೂ ಅಂತಾರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸದಿರಲು ಕೇಂದ್ರ ವಿಮಾನಯಾನ ಸಚಿವಾಲಯ ನಿರ್ಧರಿಸಿತ್ತು. ಇದೀಗ 4 ತಿಂಗಳ ಬಳಿಕ ಆಗಸ್ಟ್​ ತಿಂಗಳಿನಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಲ್ಲಿಯವರೆಗೆ ವಂದೇ ಭಾರತ್ ಮಿಷನ್ ಮೂಲಕ ಜುಲೈ 31ರವರೆಗೂ ವಿದೇಶಗಳಲ್ಲಿರುವ ಸಿಲುಕಿರುವ ಭಾರತೀಯರನ್ನು ಕರೆತರಲಾಗುವುದು. ಈಗಾಗಲೇ 4ನೇ ಹಂತದ ಕಾರ್ಯಾಚರಣೆ ಆರಂಭಗೊಂಡಿದ್ದು, ಅರಬ್ ದೇಶಗಳು, ಅಮೆರಿಕ, ಇಂಗ್ಲೆಂಡ್, ಶ್ರೀಲಂಕಾ ಮುಂತಾದ ದೇಶಗಳಿಂದ ಭಾರತೀಯರನ್ನು ವಾಪಾಸ್ ಕರೆತರಲಾಗುತ್ತಿದೆ.

ಮುಖ್ಯವಾಗಿ ಅಮೆರಿಕ, ಕೆನಡಾ, ಯುರೋಪ್​, ಗಲ್ಫ್​ ದೇಶಗಳಿಗೆ ಭಾರತದಿಂದ ವಿಮಾನ ಸಂಚಾರವನ್ನು ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ. ಹಂತಹಂತವಾಗಿ ಬೇರೆ ದೇಶಗಳಿಗೆ ವಿಮಾನ ಸಂಚಾರವನ್ನು ಆರಂಭಿಸಲಾಗುವುದು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

ವಂದೇ ಭಾರತ್​ ಮಿಷನ್​-4ರ ಅಡಿಯಲ್ಲಿ 637 ವಿಮಾನಗಳು ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರಲಿವೆ. ಅದರಲ್ಲಿ ಮುಖ್ಯವಾಗಿ 31 ವಿಮಾನಗಳು ಅಮೆರಿಕ, 19 ವಿಮಾನಗಳು ಇಂಗ್ಲೆಂಡ್, 9 ಕೆನಡಾ ಮತ್ತು 8 ವಿಮಾನಗಳು ಆಸ್ಟ್ರೇಲಿಯಾದಲ್ಲಿರುವವರನ್ನು ಕರೆತರಲಿವೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್​, ಸೌದಿ ಅರೇಬಿಯ, ಕೀನ್ಯಾ, ಬಾಂಗ್ಲಾದೇಶ, ಶ್ರೀಲಂಕಾ ಮುಂತಾದ 17 ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಜುಲೈ 31ರವರೆಗೆ ವಿಮಾನಗಳ ಮೂಲಕ ಕರೆತರಲಾಗುವುದು. ಈ ಮಿಷನ್​ಗೆ ಕೈಜೋಡಿಸಲು ಖಾಸಗಿ ವಿಮಾನ ಸಂಸ್ಥೆಗಳು ಮುಂದಾಗಿವೆ. ಭಾರತದ 29 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ವಿದೇಶಗಳಲ್ಲಿರುವ ಭಾರತೀಯರು ಬಂದಿಳಿಯಲಿದ್ದಾರೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ತಿಳಿಸಿದೆ.

Comments are closed.