ರಾಷ್ಟ್ರೀಯ

ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚನೆ

Pinterest LinkedIn Tumblr

ನವದೆಹಲಿ: ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದೆ ಎಂದು ತಿಳಿದುಬಂದಿದೆ.

ಹೌದು.. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧ ಕೇಳಿಬಂದಿರುವ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಕೇಂದ್ರ ಸರ್ಕಾರ ತಿಳಿಸಿದ್ದು, ಈ ಸಂಬಂಧ ತನಿಖೆಗೆ ಸಮಿತಿ ರಚನೆ ಮಾಡಿದೆ.

ಮೂಲಗಳ ಪ್ರಕಾರ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ಗಳ ವಿರುದ್ಧ ಆದಾಯ ತೆರಿಗೆ ವಂಚನೆ ಹಾಗೂ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆಯಂತಹ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಅಂತರ್-ಸಚಿವಾಲಯ ಸಮಿತಿಯನ್ನು ರಚಿಸಿದೆ.

ಈ ಬಗ್ಗೆ ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದು, ಗಾಂಧಿ ಕುಟುಂಬ ನಡೆಸುವ ಟ್ರಸ್ಟ್‌ಗಳಿಂದ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ),ಆದಾಯ ತೆರಿಗೆ ಕಾಯ್ದೆ ಮತ್ತು ವಿದೇಶಿ ಕೊಡುಗೆ (ನಿಯಂತ್ರಣ)ಕಾಯ್ದೆಗಳಂತಹ ಕಾನೂನುಗಳ ಉಲ್ಲಂಘನೆಗಳ ಬಗ್ಗೆ ತನಿಖೆ ಕೇಂದ್ರೀಕರಿಸಲಿದೆ. ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕಳೆದ ತಿಂಗಳು ಆಡಳಿತರೂಢ ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಮನಮೋಹನ್ ಸಿಂಗ್ ಆಡಳಿತದ ಯುಪಿಎ ಸರಕಾರ ಅಧಿಕಾರವಿದ್ದಾಗ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹಣವನ್ನು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡಿತ್ತು ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದರು. ಈ ಟ್ರಸ್ಟ್ ಗಳಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಶೋಕ್ ಗಂಗೂಲಿ ಮತ್ತು ಬನ್ಸಿ ಮೆಹ್ತಾ. ಸಿಇಒ ಡೀಪ್ ಜೋಶಿ ಇನ್ನಿತರರು ಇದ್ದಾರೆ ಎನ್ನಲಾಗಿದೆ.

Comments are closed.