ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆ ವೇಳೆ 9 ಮುಸ್ಲಿಮರನ್ನು ಜೈಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಕೆಲವರು ವಾಟ್ಸ್ ಆಪ್ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ.
ಹತ್ಯೆ ಪ್ರಕರಣದ ಆರೋಪಿಗಳು, ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಫೆ.25 ರಂದು ಸೃಷ್ಟಿಯಾದ ಕಟ್ಟರ್ ಹಿಂದೂ ಏಕತಾ ಎಂಬ ವಾಟ್ಸ್ ಆಪ್ ನ ಗ್ರೂಪ್ ನ ಭಾಗವಾಗಿದ್ದರು ಎಂದು ಪೊಲೀಸರು ಹೇಳಿದ್ದು, ಈ ವಾಟ್ಸ್ ಆಪ್ ಗ್ರೂಪ್ ಮೂಲಕ ಜನರನ್ನು ಸೇರಿಸುವುದು, ಮಾರಕಾಸ್ತ್ರಗಳ ವ್ಯವಸ್ಥೆ ಮಾಡುವುದನ್ನು ಮಾಡುತ್ತಿದ್ದರು ಎಂದು ಚಾರ್ಚ್ಜ್ ಶೀಟ್ ನಲ್ಲಿ ತಿಳಿಸಿದ್ದಾರೆ.
ಈ ವಾಟ್ಸ್ ಆಪ್ ಗ್ರೂಪ್ ನ ಸೃಷ್ಟಿಸಿದ ವ್ಯಕ್ತಿ ಈಗಲೂ ಕಾಣೆಯಾಗಿದ್ದು, ಪ್ರಾರಂಭದಲ್ಲಿ 125 ಜನರಿದ್ದ ಗ್ರೂಪ್ ನಲ್ಲಿ ಮಾರ್ಚ್.8 ರ ವೇಳೆಗೆ 47 ಜನರು ಎಕ್ಸಿಟ್ ಆಗಿದ್ದರು ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಗೌತಮ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ತಿಳಿಸಿದ್ದಾರೆ.
ಹಮ್ಝಾ, ಆಮೀನ್, ಭುರೆ ಅಲಿ, ಮುರ್ಸಾಲೀನ್, ಆಸ್ ಮೋಹ್ದ್, ಮುಶ್ರಾಫ್, ಅಕಿಲ್ ಅಹ್ಮದ್ ಹಾಗೂ ಹಶೀಮ್ ಅಲಿ ಆತನ ಹಿರಿಯ ಸಹೋದರ ಆಮೀರ್ ಖಾನ್ ಗಲಭೆಯಲ್ಲಿ ಹತ್ಯೆಗೀಡಾದವರಾಗಿದ್ದಾರೆ. “ಜತಿನ್ ಶರ್ಮಾ, ರಿಷಭ್ ಚೌಧರಿ, ವಿವೇಕ್ ಪಾಂಚಾಲ್, ಲೋಕೇಶ್ ಸೋಲಂಕಿ, ಪಂಕಜ್ ಶರ್ಮಾ, ಪ್ರಿನ್ಸ್, ಸುಮಿತ್ ಚೌಧರಿ, ಅಂಕಿತ್ ಚೌಧರಿ, ಹಿಮಾಂಶು ಠಾಕೂರ್ ಹಾಗೂ ಇನ್ನಿತರ ಗುರುತು ಪತ್ತೆಯಾಗದ ಗಲಭೆಕೋರರು ಈಶಾನ್ಯ ದೆಹಲಿಯ ಗಂಗಾವಿಹಾರ್/ ಭಗೀರತಿ ವಿಹಾರ್ ಪ್ರದೇಶಗಳಲ್ಲಿ ಫೆ.25-26 ರಂದು ಮಧ್ಯರಾತ್ರಿ ಸಕ್ರಿಯರಾಗಿ 9 ಮುಸ್ಲಿಮರನ್ನು ಹತ್ಯೆ ಮಾಡಿದ್ದಾರೆ” ಎಂದು ಪೊಲೀಸ್ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಜನರನ್ನು ಹಿಡಿದು ಅವರ ಹೆಸರು, ವಿಳಾಸ, ವಿವರಗಳನ್ನು ಕೇಳಿ ಅವರಿಗೆ ಜೈ ಶ್ರೀರಾಮ್ ಘೋಷಣೆ ಕೂಗಲು ಹಲವು ಬಾರಿ ಒತ್ತಾಯ ಮಾಡುತ್ತಿದರು. ಘೋಷಣೆ ಕೂಗಲು ಒಪ್ಪದ, ಮುಸ್ಲಿಂ ಗುರುತನ್ನು ಹೊಂದಿದವರನ್ನು ಹಿಡಿದು ಭಗಿರತಿ ವಿಹಾರ್ ನ ಮುಖ್ಯ ಚರಂಡಿಯಲ್ಲಿ ಎಸೆಯುತ್ತಿದ್ದರು ಎಂಬುದಾಗಿ ಕೊಲೆ ಮಾಡಿದವರ ಕಾರ್ಯವಿಧಾನವನ್ನು ಪೊಲೀಸ್ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ. ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಜು.13 ಕ್ಕೆ ನಿಗದಿಪಡಿಸಿದೆ.
Comments are closed.